ಸಾರಾಂಶ
ಕಳೆದ ವರ್ಷ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಹಾಗೂ ವಿದ್ಯಾರ್ಥಿಗಳಗಾಗಿ ಜ್ಞಾನದೀಪ್ತಿ ಶಿಬಿರವನ್ನು ಏರ್ಪಡಿಸಿ ಮತಕ್ಷೇತ್ರದಲ್ಲಿ ಅರ್ಥಪೂರ್ಣವಾದ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈ ವರ್ಷ ಬರಗಾಲ ಇರುವ ಕಾರಣ ಆಡಂಬರ ರಹಿತವಾದ ಆಚರಣೆ ಮಾಡಲಾಗಿದೆ. ಸಮಾಜಕ್ಕೆ ಅತ್ಯಂತ ಅವಶ್ಯವಿರುವ ಕಾರ್ಯಗಳಾದ ರಕ್ತದಾನ ಶಿಬಿರ ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನನ್ನ ಮತಕ್ಷೇತ್ರದಲ್ಲಿ ಜನರ ಇಚ್ಛೆಯಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಸಿ. ಸಿ. ಪಾಟೀಲ ಹೇಳಿದರು.
ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದ ಮಾಜಿ ಸಚಿವ
ನರಗುಂದ:ಕಳೆದ ವರ್ಷ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಹಾಗೂ ವಿದ್ಯಾರ್ಥಿಗಳಗಾಗಿ ಜ್ಞಾನದೀಪ್ತಿ ಶಿಬಿರವನ್ನು ಏರ್ಪಡಿಸಿ ಮತಕ್ಷೇತ್ರದಲ್ಲಿ ಅರ್ಥಪೂರ್ಣವಾದ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈ ವರ್ಷ ಬರಗಾಲ ಇರುವ ಕಾರಣ ಆಡಂಬರ ರಹಿತವಾದ ಆಚರಣೆ ಮಾಡಲಾಗಿದೆ. ಸಮಾಜಕ್ಕೆ ಅತ್ಯಂತ ಅವಶ್ಯವಿರುವ ಕಾರ್ಯಗಳಾದ ರಕ್ತದಾನ ಶಿಬಿರ ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನನ್ನ ಮತಕ್ಷೇತ್ರದಲ್ಲಿ ಜನರ ಇಚ್ಛೆಯಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಸಿ. ಸಿ. ಪಾಟೀಲ ಹೇಳಿದರು.ಅವರು ಪಟ್ಟಣದ ದಂಡಾಪುರದಲ್ಲಿನ ಆರಾಧ್ಯ ದೇವರಾದ ಶ್ರೀಶೈಲ ಮಲ್ಲಿಕಾರ್ಜುನ ಮಂದಿರ, ಉಡಚಾಪರಮೇಶ್ವರಿ, ಸಿದ್ದೇಶ್ವರ ದೇವಸ್ಥಾನ, ದುರ್ಗಾದೇವಿ ಮಂದಿರಗಳಿಗೆ ತೆರಳಿ ದೇವರ ದರ್ಶನ ಪಡೆದ ಆನಂತರ ಲಯನ್ಸ್ ಕ್ಲಬ್ ಹಾಗೂ ಸಿ. ಸಿ. ಪಾಟೀಲ ಅಭಿಮಾನಿ ಬಳಗದಿಂದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೦೦ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಆನಂತರ ಮಾತನಾಡಿದರು.
೨೦೧೩ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಮೆಣಸಗಿ ಗ್ರಾಮದಲ್ಲಿ ಆಕಸ್ಮಿಕ ಗುಂಡೇಟಿನಿಂದ ಸಾವು ಬದುಕಿನಲ್ಲಿ ಹೋರಾಡಿ ಸಾವನ್ನೆ ಗೆದ್ದು ಬಂದ ನಂತರ ಮತಕ್ಷೇತ್ರದ ಜನತೆ ೨೦೧೮ರಿಂದ ಮತ್ತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಮತಕ್ಷೇತ್ರದ ಜನರ ಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ನನ್ನ ರಾಜಕೀಯ ಅವಧಿಯಲ್ಲಿ ಆರೇಳು ಖಾತೆಗಳನ್ನು ನಿರ್ವಹಿಸಿದ ಸಂತೃಪ್ತಿ ನನಗಿದೆ. ಅದರಲ್ಲಿ ಲೋಕೋಪಯೋಗಿ ಸಚಿವನಾಗಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡುವ ಜತೆಗೆ ನನ್ನ ಮತಕ್ಷೇತ್ರವನ್ನು ವಿಶೇಷ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಹಲವು ಬಾರಿ ಮತದಾರರು ನನ್ನ ಮರು ಆಯ್ಕೆ ಮಾಡಿದ್ದರಿಂದ ಅಭಿವೃದ್ಧಿ ಮೂಲಕ ಅವರ ಋಣ ತೀರಿಸಿದ ಸಂತೃಪ್ತಿ ಇದೆ. ಎಲ್ಲದರ ನಡುವೆ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಬಲ ಗಾಳಿ ಇರುವಾಗಲೇ ಮತ್ತೆ ನನ್ನನ್ನು ಮರು ಆಯ್ಕೆ ಮಾಡಿದ್ದಾರೆ ಎಂದರು.ಮತದಾರರ ಋಣವನ್ನು ನಾನೆಂದೂ ಮರೆಯುವುದಿಲ್ಲ. ನನ್ನ ಹುಟ್ಟುಹಬ್ಬದ ಸಂದರ್ಭ ಶುಭಕೋರಲು ಆಗಮಿಸಿದ ಎಲ್ಲ ಜನತೆ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದರು.
ಉಮೇಶಗೌಡ ಪಾಟೀಲ, ಎಸ್.ಎಸ್. ಪಾಟೀಲ, ಜಯಪ್ರಕಾಶ ಕಂಠಿ, ಅನಿಲ ಧರಿಯಣ್ಣವರ, ಡಾ. ಪ್ರಭು ನಂದಿ, ಸಿದ್ಧಾರೂಢ ಪಾತ್ರೋಟ, ಈರಣ್ಣ ಹೊಂಗಲ, ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ ಕುಂಬಾರ, ಎನ್.ವಿ. ಮೇಟಿ, ರಾಮು ಕಾಳೆ, ಸಿದ್ದೇಶ ಹೂಗಾರ, ವಿಠ್ಠಲ ಹವಾಲ್ದಾರ, ವಿನಾಯಕ ಹಟ್ಟಿ ಉಪಸ್ಥಿತರಿದ್ದರು.