ಸಾರಾಂಶ
ಅರಕಲಗೂಡು ಪಟ್ಟಣದ ಆರ್. ಆರ್. ಗೋಲ್ಡ್ ಪ್ಯಾಲೇಸ್‌ನಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ನಾಲ್ವರು ಮಹಿಳೆಯರು ಬುರ್ಖಾ ಧರಿಸಿ ಮಾರುವೇಷದಲ್ಲಿ ಆಗಮಿಸಿ 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಓಲೆ, ಮಾಂಗಲ್ಯ ಸರ ಕಳುವಾಗಿವೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ಚಿನ್ನಾಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಖತರ್ನಾಕ್ ಕಳ್ಳಿಯರು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಪಟ್ಟಣದ ಆರ್. ಆರ್. ಗೋಲ್ಡ್ ಪ್ಯಾಲೇಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಚಿನ್ನಾಭರಣ ಖರೀದಿಸುವ ನೆಪದಲ್ಲಿ ನಾಲ್ವರು ಮಹಿಳೆಯರು ಬುರ್ಖಾ ಧರಿಸಿ ಮಾರುವೇಷದಲ್ಲಿ ಜು.11ರ ಗುರುವಾರ ಮಧ್ಯಾಹ್ನ ಸುಮಾರು 2-45ರ ವೇಳೆಗೆ ಆರ್. ಆರ್. ಗೋಲ್ಡ್ ಪ್ಯಾಲೇಸ್ ಅಂಗಡಿಗೆ ಬಂದಿದ್ದು, ಓಲೆ, ಮಾಂಗಲ್ಯ ಸರ ಬೇಕೆಂದು ಕೇಳಿದ್ದಾರೆ. ಈ ವೇಳೆ ಅಂಗಡಿ ಸೇಲ್ಸ್ ಮನ್ ಓಲೆ, ಮಾಂಗಲ್ಯ ಸರವನ್ನು ತೋರಿಸಿದ್ದಾರೆ. ನೋಡುವ ನೆಪದಲ್ಲಿ ಕಳ್ಳಿಯರು 6.91 ಲಕ್ಷ ರು. ಮೌಲ್ಯದ 94.715 ಗ್ರಾಂ ತೂಕದ ಚಿನ್ನಾಭರಣ ಮಾಂಗಲ್ಯ ಸರ ಮತ್ತು ಓಲೆಯನ್ನು ಸೇಲ್ಸ್ ಮನ್ ಗಳ ಕಣ್ಣುತಪ್ಪಿಸಿ ಕಳವು ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೇರಿಯಾಗಿದೆ.