ಅಪಘಾತದಲ್ಲಿ ಆರು ಜನ ಸಾವು

| Published : Feb 23 2024, 01:48 AM IST

ಸಾರಾಂಶ

ಧಾರವಾಡ ಮೂಲದ ಲಂಗೋಟಿ ಮತ್ತು ಹಾರೂಗೇರಿಯ ಜಮಾದಾರ ಕುಟುಂಬಗಳ ಸದಸ್ಯರು ತಾಲೂಕಿನ ಗೋಲಿಹಳ್ಳಿ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ಗುರುವಾರ ಸಂಜೆ ನಡೆಯಲಿದ್ದ ಮದುವೆಗೆ ಧಾರವಾಡದಿಂದ ಕಿತ್ತೂರು, ಬೀಡಿ ಮಾರ್ಗವಾಗಿ ಕಾರಿನಲ್ಲಿ ಗೋಲಿಹಳ್ಳಿಯತ್ತ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ರಸ್ತೆ ಪಕ್ಕದ ಮರಕ್ಕೆ ಕಾರು ರಭಸವಾಗಿ ಗುದ್ದಿದ ಪರಿಣಾಮ ಕಾರಿನ ಚಾಲಕ ಸೇರಿ ಆರು ಜನ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಂಗೇನಕೊಪ್ಪ ಗ್ರಾಮದ ಬಳಿ ಬೀಡಿ - ಕಿತ್ತೂರು ರಸ್ತೆಯಲ್ಲಿ ಸಂಭವಿಸಿದೆ.

ಕಾರು ಚಾಲಕ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಶಹಾಪುರ ನಿವಾಸಿ ಶಾರುಕ್ ಪೆಂಡಾರಿ (30), ರಾಯಬಾಗ ತಾಲೂಕು ಹಾರೂಗೇರಿ ನಿವಾಸಿ ಇಕ್ಬಾಲ್ ಜಮಾದಾರ (50), ಅವರ ಪುತ್ರ ಫರಾನ್ ಲಂಗೋಟಿ (13), ಧಾರವಾಡ ನಗರದ ನಿವಾಸಿಗಳಾದ ಸಾನಿಯಾ ಲಂಗೋಟಿ (37), ಉಮರ್‌ಬೇಗಮ್ ಲಂಗೋಟಿ (17), ಶಬನಮ ಲಂಗೋಟಿ (37) ಮೃತಪಟ್ಟವರು.ಚನ್ನಮ್ಮನ ಕಿತ್ತೂರಿನ ಫರಾತ್‌ ಬೆಟಗೇರಿ (18), ಧಾರವಾಡದ ಸೋಫಿಯಾ ಲಂಗೋಟಿ (22), ಹಾರೂಗೇರಿಯ ಸಾನಿಯಾ ಇಕ್ಬಾಲ್ ಜಮಾದಾರ (36) ಮತ್ತು ಮಾಹಿನ್ ಲಂಗೋಟಿ (7) ಎಂಬ ನಾಲ್ವರು ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ನೋಂದಣಿ ಹೊಂದಿದ್ದ ಕಾರಿನಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದು, ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಮೂಲದ ಲಂಗೋಟಿ ಮತ್ತು ಹಾರೂಗೇರಿಯ ಜಮಾದಾರ ಕುಟುಂಬಗಳ ಸದಸ್ಯರು ತಾಲೂಕಿನ ಗೋಲಿಹಳ್ಳಿ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ಗುರುವಾರ ಸಂಜೆ ನಡೆಯಲಿದ್ದ ಮದುವೆಗೆ ಧಾರವಾಡದಿಂದ ಕಿತ್ತೂರು, ಬೀಡಿ ಮಾರ್ಗವಾಗಿ ಕಾರಿನಲ್ಲಿ ಗೋಲಿಹಳ್ಳಿಯತ್ತ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಬೈಲಹೊಂಗಲ ಡಿಎಸ್‌ಪಿ ರವಿ ನಾಯ್ಕ, ಸಿಪಿಐ ಸೇರಿದಂತೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.