ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಭೂಮಿಯನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಬೇಕು ಹಾಗೂ ಎಲ್ಲಾ ಜೀವಿಗಳಿಗು ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಎಂ.ಜಿ. ರಸ್ತೆ) ಸಹ ಪ್ರಾಧ್ಯಾಪಕ ಡಾ. ಕೆ. ಬಾಷಾ ತಿಳಿಸಿದರು.ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ ಘಟಕದ ವತಿಯಿಂದ ಗುರುವಾರ ನಡೆದ ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಭೌತಿಕ ಸಂಪತ್ತು ಅನ್ನುವುದು ೩೦೦ ವರ್ಷಗಳಿಂದ ಇದೆ. ಆದರೆ ನಿರ್ಗತಿಕರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಅನ್ನುವುದು ವ್ಯಾಪಾರವಾಗಿ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ. ಹಲವಾರು ದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸೇವೆಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಇದರ ಬಗ್ಗೆ ಹೆಚ್ಚು ಗಮನ ವಹಿಸಿ ಬಡವರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ವ್ಯಾಪಾರ ಮತ್ತು ಸೂಕ್ಷ್ಮ ಅರ್ಥಶಾಸ್ತ್ರದ ಪರಿಕಲ್ಪನೆಯು ಸಮಾಜಶಾಸ್ತ್ರದಲ್ಲಿ ಹೇಗೆ ಬೆಳಕಾಗುತ್ತದೆ ಮತ್ತು ಮನುಷ್ಯನಿಗೆ ಹಣ ಮಾಡುವುದರ ಬಗ್ಗೆ ಆಯಾಮ ಇರುವುದಿಲ್ಲ. ಇದರಿಂದ ದುರಾಸೆ ಎಂಬುದು ಹೆಚ್ಚಾಗಿ ದೇಶ ಹಾಳಾಗುವಂತಾಗಿದೆ ಎಂದರು.
ನಮ್ಮ ದೇಶದಲ್ಲಿ ಶೇಕಡ ೩೩% ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದೇಶಿಗಳಲ್ಲಿ ಸೋಶಿಯಲ್ ಬಿಸ್ನಸ್‌ನ ಬಗ್ಗೆ ಹಲವಾರು ರೀತಿಯ ಪ್ರಯೋಗಕ್ಕೆ ಮುಂದಾಗಿವೆ. ನಮ್ಮ ದೇಶದಲ್ಲಿ ಈ ಪರಿಕಲ್ಪನೆ ಆಧಾರವಾಗಿ ಸಮಾಜಕ್ಕೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಲು ಮುಂದಾಗಬೇಕು. ವಿದ್ಯಾರ್ಥಿಗಳು ಬ್ಯಾಂಕ್‌ಗಳು ಹಾಗೂ ಅವುಗಳ ಕಾರ್ಯಗಳ ಬಗ್ಗೆ ಅಪಾರವಾದ ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ಯಾವುದೇ ಕೆಲಸ ಮಾಡಲು ಕೌಶಲ್ಯಗಳನ್ನು ಅರಿತಿರಬೇಕು. ಸ್ವತಃ ದುಡಿಯುವ ಮನಸ್ಥಿತಿ ಎಲ್ಲವನ್ನು ನಿಭಾಯಿಸುತ್ತೆನೆಂಬ ಧ್ಯೇಯ ಹೆಣ್ಣು ಮಕ್ಕಳಿಗೆ ಬಲವಾಗಿರಬೇಕು. ಸಮಸ್ಯೆಗಳೊಂದಿಗೆ ಸಂಧಾನ ಮಾಡಿಕೊಳ್ಳಬಾರದು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ವಿಚಾರ ಎಂಬುದು ವಿಶಾಲವಾದ ಅಧ್ಯಯನವಾಗಿದೆ. ಮಾನವ ಸಂಘಜೀವಿಯಾಗಿದ್ದರೂ ಸಹ ಕೂಡಿ ಬಾಳುವ ಮನೋಭಾವನೆ ಇಲ್ಲ. ಸಾಮಾಜಿಕ ಬದ್ಧತೆ ಇರುವ ಕೆಲವರು ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಬೇಕು. ಆರ್ಥಿಕ ಸಮಸ್ಯೆಯಿಂದ ಪಾರಾಗಲೂ ಜನರು ಹಣ ತೆಗೆದು ಬೇರೆ ಕಡೆ ಬಂಡವಾಳ ಹೂಡುತ್ತಾರೆ. ಇದರಿಂದ ಸಾಲ ತೀರಿಸಲಾಗದೆ ಸಾಲಗಾರನಾಗುತ್ತಾನೆ. ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಿದರೂ ನಮ್ಮ ಜೀವನದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಸುರೇಶ್ ಕುಮಾರ್, ಸಹ ಪ್ರಾಧ್ಯಾಪಕಿ ಡಾ.ಡಿ. ವನಿತ, ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.