ಬ್ರಹ್ಮಾವರದಲ್ಲಿ ‘ಸ್ಪೆಷಲ್ 26’ ಮಾದರಿಯ ಐಟಿ ದಾಳಿಯ ಯತ್ನ!

| Published : Jul 30 2024, 12:38 AM IST

ಬ್ರಹ್ಮಾವರದಲ್ಲಿ ‘ಸ್ಪೆಷಲ್ 26’ ಮಾದರಿಯ ಐಟಿ ದಾಳಿಯ ಯತ್ನ!
Share this Article
  • FB
  • TW
  • Linkdin
  • Email

ಸಾರಾಂಶ

ಜು.25ರಂದು ಬೆಳಗ್ಗೆ 8.30ಕ್ಕೆ ಎರಡು ಕಾರಿನಲ್ಲಿ ಬಂದ ಅಪರಿಚತರು ಇಲ್ಲಿನ ಕವಿತಾ ಎಂಬವರ ಮನೆಗೆ ನುಗ್ಗುವುದಕ್ಕೆ ಪ್ರಯತ್ನಿಸಿದ್ದಾರೆ. ಅಧಿಕಾರಿಗಳಂತೆ ಠಾಕುಠೀಕಾಗಿ ಬಟ್ಟೆ ಧರಿಸಿದ್ದ 5- 6 ಮಂದಿ ಮನೆಯ ಗೇಟನ್ನು ತೆರೆಯಲು ಯತ್ನಿಸಿದ್ದಾರೆ. ಅವರಲ್ಲಿ ಒಬ್ಬಾತ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ, ಇನ್ನೊಬ್ಬನ ತಲೆ ಮೇಲೆ ಸಿಖ್ಖರ ಪೇಟಾ ಇತ್ತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅಕ್ಷಯ್ ಕುಮಾರ್ ಅಭಿನಯದ ‘ಸ್ಪೆಷಲ್ 26’ ಎಂಬ ನಕಲಿ ಐಟಿ ಅಧಿಕಾರಿಗಳು ದಾಳಿ ನೆಪದಲ್ಲಿ ಶ್ರೀಮಂತರನ್ನು ದರೋಡೆ ಮಾಡುವ ಸಿನಿಮಾದ ಮಾದರಿಯಲ್ಲಿ ನಕಲಿ ಐಟಿ ದಾಳಿಯ ಪ್ರಯತ್ನವೊಂದು ಇಲ್ಲಿನ ಕೋಟ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದೆ.

ಜು.25ರಂದು ಬೆಳಗ್ಗೆ 8.30ಕ್ಕೆ ಎರಡು ಕಾರಿನಲ್ಲಿ ಬಂದ ಅಪರಿಚತರು ಇಲ್ಲಿನ ಕವಿತಾ ಎಂಬವರ ಮನೆಗೆ ನುಗ್ಗುವುದಕ್ಕೆ ಪ್ರಯತ್ನಿಸಿದ್ದಾರೆ. ಅಧಿಕಾರಿಗಳಂತೆ ಠಾಕುಠೀಕಾಗಿ ಬಟ್ಟೆ ಧರಿಸಿದ್ದ 5- 6 ಮಂದಿ ಮನೆಯ ಗೇಟನ್ನು ತೆರೆಯಲು ಯತ್ನಿಸಿದ್ದಾರೆ. ಅವರಲ್ಲಿ ಒಬ್ಬಾತ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ, ಇನ್ನೊಬ್ಬನ ತಲೆ ಮೇಲೆ ಸಿಖ್ಖರ ಪೇಟಾ ಇತ್ತು. ಆದರೆ ಗೇಟು ಲಾಕ್ ಆಗಿದ್ದರಿಂದ 3 ಮಂದಿ ಕಂಪೌಂಡ್ ಹಾರಿ ಮನೆಯಂಗಳಕ್ಕೆ ಬಂದಿದ್ದಾರೆ. ಬೆಲ್ ಮಾಡಿದರೂ ಮನೆಯವರು ಬಾಗಿಲು ತೆರೆಯದಿದ್ದಾಗ, ಬಲವಂತವಾಗಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಲು ಯತ್ನಿಸಿದರು. ಸಾಧ್ಯವಾಗದಿದ್ದಾಗ ಬಂದಿದ್ದ ಕಾರು ಹತ್ತಿ ಪರಾರಿಯಾಗಿದ್ದಾರೆ.

ಅವರ ಇಷ್ಟೆಲ್ಲ ಕೃತ್ಯಗಳನ್ನು ತಮ್ಮ ಕಚೇರಿಯಿಂದ ಲೈವ್ ವೀಕ್ಷಿಸುತ್ತಿದ್ದ ಈ ಮನೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದ ಕುಂದಾಪುರದ ‘ಸೈನ್ ಇನ್ ಸೆಕ್ಯುರಿಟಿ’ ಸಂಸ್ಥೆಯವರು ಸಂಶಯಗೊಂಡು ತಕ್ಷಣ ಕವಿತಾ ಅವರ ಮನೆಗೆ ಕರೆ ಮಾಡಿ, ಆಪರಿಚಿತರು ಮನೆಗೆ ಪ್ರವೇಶಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಅದರಂತೆ ಮನೆಯವರು ಬಾಗಿಲು ತೆರೆದಿರಲಿಲ್ಲ.

ಬಂದವರ ಹಾವಭಾವ ನೋಡಿದರೆ ಅವರು ನಿಜವಾದ ಐಟಿ ಅಧಿಕಾರಿಗಳಲ್ಲ, ಐಟಿ ಅಧಿಕಾರಿಗಳಾಗಿದ್ದರೇ ತಾವು ಬಂದ ಕೆಲಸವನ್ನು ಮಾಡದೇ ಹಿಂದಕ್ಕೆ ಹೋಗುತ್ತಿರಲಿಲ್ಲ, ಸ್ಥಳೀಯ ಪೊಲೀಸರ ಸಹಾಯದಿಂದ ಬಾಗಿಲು ತೆರೆಸುತ್ತಿದ್ದರು. ಆದರೆ ಬಂದವರು ಹಿಂದಕ್ಕೆ ಹೋಗಿರುವುದರಿಂದ ಸಂಶಯಗೊಂಡು ಇದೀಗ ಮನೆ ಮಾಲಕಿ ಕವಿತಾ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಗೆ ಪೊಲೀಸರ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ನಕಲಿ ಐಟಿ ಅಧಿಕಾರಿಗಳ ದಾಳಿಗೆ ಒಳಗಾದ ಈ ಮನೆಯ ಮಾಲಕನ ಮೇಲೆ ಆ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ನಂತಹ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.

---ಟೋಲ್ ಯಾಕೆ ತಪ್ಪಿಸಿದರು? ನಕಲಿ ನಂಬರ್ ಪ್ಲೇಟ್?

ತನಿಖೆಯಲ್ಲಿ ಆಗಂತುಕರು ಸಾಸ್ತಾನ ಟೋಲ್ ಮಾರ್ಗದಲ್ಲಿ ಸಾಗದೆ, ಬಾರ್ಕೂರು ರಸ್ತೆ ಮೂಲಕ ಟೋಲ್ ತಪ್ಪಿಸಿ ಹೋಗಿದ್ದಾರೆ. ಐಟಿ ಅಧಿಕಾರಿಗಳಿಗೆ ಟೋಲ್ ತಪ್ಪಿಸುವ ಅಗತ್ಯವಿರಲಿಲ್ಲ. ಜೊತೆಗೆ ಅವರು ಬಂದಿದ್ದ ಸ್ವಿಪ್ಟ್ ಮತ್ತು ಇನ್ನೊವಾ ಕಾರುಗಳು ಅತಿವೇಗದಲ್ಲಿ ಸಾಗಿದ್ದು, ಕಾರಿನ ನಂಬರ್ ಪ್ಲೇಟ್‌ಗಳ ಗುರುತು ಹಚ್ಚಲೂ ಸಾಧ್ಯವಾಗದಂತೆ ಅವರು ತಯಾರಿ ಮಾಡಿಕೊಂಡಿದ್ದು ಪತ್ತೆಯಾಗಿದೆ. ಇದೆಲ್ಲವೂ ಅವರು ನಕಲಿ ಐಟಿ ಅಧಿಕಾರಿಗಳು, ದರೋಡೆಗೆ ಬಂದಿದ್ದರು ಸಂಶಯಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.