ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರ ಗ್ರಾಮದಲ್ಲಿ ಊಟ, ಬಟ್ಟೆಯಿಲ್ಲದೆ, ಸೋರುತ್ತಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಬುದ್ಧಿಮಾಂದ್ಯ, ವಿಶೇಷಚೇತನರೇ ಇರುವ ಕುಟುಂಬಕ್ಕೆ ತುಮಕೂರಿನ ಸಂಮೃದ್ಧಿ ಶಿಕ್ಷಣ ಟ್ರಸ್ಟ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ. ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ತಂಡ ದೊಡ್ಡ ರಾಂಪುರ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಅಗತ್ಯವಾದ ದಿನಸಿ, ಅಡುಗೆ ಎಣ್ಣೆ, ತರಕಾರಿ, ಪಾತ್ರೆ, ಬೆಡ್ ಶೀಟ್, ಬಟ್ಟೆ ಹಾಗೂ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ನೋಟ್ ಬುಕ್, ಟ್ರಂಕ್ ವಿತರಿಸಿ ಆ ಕುಟುಂಬಕ್ಕೆ ನೆರವಾಗಿದ್ದಾರೆ.ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ನಮ್ಮ ಸಂಮೃದ್ದಿ ಶಿಕ್ಷಣ ಟ್ರಸ್ಟ್ ಬಡ ಕುಟುಂಬಗಳಿಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕಾರ್ಯ ಮಾಡುತ್ತಾ ಬಂದಿದೆ, ದೊಡ್ಡರಾಂಪುರದ ಬಡ ಕುಟುಂಬದ ಶೋಚನೀಯ ಸ್ಥಿತಿ ತಿಳಿದು ಅಗತ್ಯ ಆಹಾರ ಸಾಮಗ್ರಿ, ಬಟ್ಟೆ, ಆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ್ದೇವೆ, ಮುಂದೆಯು ಈ ಕುಟುಂಬದ ಜೊತೆ ಟ್ರಸ್ಟ್ ಇರಲಿದೆ ಎಂದು ತಿಳಿಸಿದ್ದಾರೆ.ಟ್ರಸ್ಟ್ ವತಿಯಿಂದ ಕಾನೂನು ಶಿಕ್ಷಣ ಪಡೆಯುವ ಐದು ಅನಾಥ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೆರವು ನೀಡಲಾಗುತ್ತೆ, ಜಿಲ್ಲೆಯ ತೀರ ಕಡುಬಡತನದ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ನಾಗರಾಜು ಬುಗುಡನಹಳ್ಳಿ. ಟ್ರಸ್ಟಿಗಳಾದ ನರಸಿಂಹರಾಜು ವಡ್ಡರಹಳ್ಳಿ. ನಾಗರಾಜು ನಂದಿಹಳ್ಳಿ, ಡಿಕೆ ಕಾಂತರಾಜು ದೊಡ್ಡೇರಿ, ಕುಮಾರ ಹೆಬ್ಬಾಕ, ಹರೀಶ್ ಬೈರಸಂದ್ರ, ಸುನಿಲ್ ತೊಂಡಗೆರೆ ಹಾಜರಿದ್ದರು.