ಸಾರಾಂಶ
ಜೈನ ಮಿಲನದ ಈ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಹಣ ಖರ್ಚು ಮಾಡಲು ಕೊಡುವ ಜನರಿದ್ದಾರೆ. ಆದರೆ ಕೆಲಸ ಮಾಡುವ ಮನೋಭಾವ ಇರಬೇಕು. ಅಂದಾಗ ಮಾತ್ರ ಇಂತಹ ಕಾರ್ಯಗಳು ನಡೆಯಲು ಸಾಧ್ಯ
ಧಾರವಾಡ: ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದಿಲ್ಲ ಒಂದು ಪ್ರತಿಭೆ ಇದ್ದೆ ಇರುತ್ತದೆ. ಅವಕಾಶಗಳ ಕೊರತೆಯಿಂದ ಅಂತರಂಗದಲ್ಲಿ ಅದು ಮುದುಡುವ ಸಾಧ್ಯತೆ ಇದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಹೇಳಿದರು.
ಇಲ್ಲಿಯ ಜೈನ್ ಮಿಲನ ಹಾಗೂ ಜನತಾ ಶಿಕ್ಷಣ ಸಮಿತಿ ಧಾರವಾಡ ಸುತ್ತಮುತ್ತಲಿನ ಗ್ರಾಮಗಳ ಜೈನ ಬಾಂಧವರಿಗಾಗಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಅವರು, ಅಖಿಲ ಭಾರತ ಮಟ್ಟದಲ್ಲಿ ಹಾಗೂ ರಾಜ್ಯ ಜಿಲ್ಲಾಮಟ್ಟಗಳಲ್ಲಿ ಜೈನ ಮಿಲನ ಶಾಖೆಗಳು ನಡೆದು ಬಂದ ಬಗ್ಗೆ ವಿವರಿಸಿ, ಈ ರೀತಿಯ ಸಮ್ಮಿಲನಗಳು ಮೇಲಿಂದ ಮೇಲೆ ಜರುಗುವಂತಾಗಲಿ ಎಂದು ಆಶಿಸಿದರು.ಕರ್ನಾಟಕ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಮಾತನಾಡಿ, ಜೈನ ಮಿಲನದ ಈ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಹಣ ಖರ್ಚು ಮಾಡಲು ಕೊಡುವ ಜನರಿದ್ದಾರೆ. ಆದರೆ ಕೆಲಸ ಮಾಡುವ ಮನೋಭಾವ ಇರಬೇಕು. ಅಂದಾಗ ಮಾತ್ರ ಇಂತಹ ಕಾರ್ಯಗಳು ನಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರ ಕುಮಾರ, ದೇಶಾದ್ಯಂತ ಜೈನ ಮಿಲನಗಳಿದ್ದು, ಅದರಲ್ಲೂ ಕರ್ನಾಟಕದ ಅನೇಕ ಶಾಖೆಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.ಸುಜಾತ ಹಡಗಲಿ, ಸಂಗೀತಾ ಉಪಾದ್ಯೆ ಮತ್ತು ಡಾ. ಸೂರಜ್ ಜೈನ್ ವೇದಿಕೆ ಮೇಲಿದ್ದರು. ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾದ್ಯೆ ಸ್ವಾಗತಿಸಿದರು. ಸುನಂದಾ ವರೂರ ವಂದಿಸಿದರು. ಒಂದು ಸಾವಿರಕ್ಕೂ ಅಧಿಕ ಸಮುದಾಯದ ಬಾಂಧವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.