ಶ್ರೀರಾಮೋತ್ಸವದಲ್ಲಿ ಮಿಂದೆದ್ದ ಭಕ್ತರು, ಎಲ್ಲೆಡೆ ಶ್ರೀರಾಮ ಜಪ

| Published : Jan 23 2024, 01:49 AM IST

ಶ್ರೀರಾಮೋತ್ಸವದಲ್ಲಿ ಮಿಂದೆದ್ದ ಭಕ್ತರು, ಎಲ್ಲೆಡೆ ಶ್ರೀರಾಮ ಜಪ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಇಡೀ ನಗರದ ಬೀದಿ ಬೀದಿಗಳಲ್ಲಿ, ಬಡಾವಣೆಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಪ್ರಮುಖ ರಸ್ತೆಗಳು ಸೇರಿದಂತೆ ಇತರೆ ಬೀದಿಗಳಲ್ಲಿ ಶ್ರೀರಾಮನ ಬೃಹತ್‌ ಕಟೌಟ್‌ಗಳು, ಶ್ರೀರಾಮನ ಪ್ರತಿಕೃತಿ ನಿರ್ಮಿಸಿ ಭಕ್ತರು ಕುಣಿದು ಕುಪ್ಪಳಿಸಿ,ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಶ್ರೀರಾಮೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಎಲ್ಲೆಡೆ ಜೈ ಶ್ರೀರಾಮ.. ಜಯ.. ಜಯ ರಾಮ... , ಸೀಯಾ ರಾಮ... ಜೈ ಶ್ರೀರಾಮ, ಜೈ ಹನುಮಾನ ಹೀಗೆ ಪ್ರಭು ಶ್ರೀರಾಮ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದವು. ಎಲ್ಲೆಡೆ ಶ್ರೀರಾಮನ ಜಯಕಾರ ಮೊಳಗಿತು.ಬೆಳಗಾವಿ ಇಡೀ ನಗರದ ಬೀದಿ ಬೀದಿಗಳಲ್ಲಿ, ಬಡಾವಣೆಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಪ್ರಮುಖ ರಸ್ತೆಗಳು ಸೇರಿದಂತೆ ಇತರೆ ಬೀದಿಗಳಲ್ಲಿ ಶ್ರೀರಾಮನ ಬೃಹತ್‌ ಕಟೌಟ್‌ಗಳು, ಶ್ರೀರಾಮನ ಪ್ರತಿಕೃತಿ ನಿರ್ಮಿಸಿ ಭಕ್ತರು ಕುಣಿದು ಕುಪ್ಪಳಿಸಿ,ಸಂಭ್ರಮಿಸಿದರು. ಮಕ್ಕಳು ಶ್ರೀರಾಮ ವೇಷತೊಟ್ಟು ಸಂಭ್ರಮಿಸುತ್ತಿರುವುದು ಸಾಮಾನ್ಯವಾಗಿತ್ತು.ಶ್ರೀರಾಮನ ಮಂದಿರಗಳು, ಶನಿ ಮಂದಿರ, ಕಪಿಲೇಶ್ವರ ಮಂದಿರ, ವೀರಭದ್ರೇಶ್ವರ ಮಂದಿರ ಸೇರಿದಂತೆ ನಗರದ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆ, ಮಹಾಭಿಷೇಕ, ಹೋಮ, ಹವನ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲ ಮಂದಿರಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಎಲ್ಲೆಡೆ ಭಕ್ತರು ಶ್ರೀರಾಮನ ನಾಮಸ್ಮರಣೆ ಮೂಲಕ ಭಕ್ತಿಯ ಪರಕಾಷ್ಟೇ ಮುಳುಗಿರುವ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು ರಾಮನ ಭಜನೆಯಲ್ಲಿತೊಡಗಿದರು.ಕಪಿಲೇಶ್ವರ ಮಂದಿರದ ಆವರಣದಲ್ಲಿ ರಂಗೋಲಿಯಲ್ಲಿ ಅರಳಿದ ಶ್ರೀರಾಮ,ಲಕ್ಷ್ಮಣ, ಸೀತಾಮಾತೆ, ಭವ್ಯ ಅಯೋಧ್ಯೆಯ ರಾಮಮಂದಿರದ ಚಿತ್ರಗಳು ಗಮನ ಸೆಳೆದವು. ಸ್ವಾತಿ ಕಣಬರಕರ, ದಿವ್ಯಾ ಕಂಗ್ರಾಳಕರ ಹಾಗೂ ಸಾತ್ವಿಕ ಎಂಬ ಮೂವರು ಕಲಾವಿದರು ರಂಗೋಲಿಯಲ್ಲಿ ಚಿತ್ರ ಬಿಡಿಸಿದ್ದ ಚಿತ್ರ ಕಣ್ಮನ ಸೆಳೆದವು. ಈ ಕಲಾವಿದರು ಸತತವಾಗಿ ಮೂರು ದಿನಗಳಿಂದ ಶ್ರಮವಹಿಸಿ ಬಿಡಿಸಿದ ರಂಗೋಲಿ ಚಿತ್ತಾಕರ್ಷಕವಾಗಿತ್ತು.ಮಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಗೊಡಚಿ ವೀರಭ್ರೇಶ್ವರ, ಸವದತ್ತಿ ಯಲ್ಲಮ್ಮ,ಹುಕ್ಕೇರಿ ಹೊಳೆಮ್ಮ ದೇವಿ ದೇವಸ್ಥಾನಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷಪೂಜೆಗಳು ನಡೆದವು. ಬಹುತೇಕ ದೇವಸ್ಥಾನಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರದರ್ಶನಕ್ಕಾಗಿ ಎಲ್‌ಇಡಿ ಸ್ಕ್ರೀನ್‌ ಅಳವಡಿಸಲಾಗಿತ್ತು. ನಗರದ ಭೆಂಡಿಬಜಾರ್-ಪಂಗುಲ್ ಗಲ್ಲಿಯಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಹತ್ತು ಬೀದಿಗಳ ವ್ಯಾಪಾರಿ ಬಂಧುಗಳು ಹಾಗೂ ಪಂಚ-ನಾಗರಿಕರ ಪರವಾಗಿ ವಿಶೇಷ ಪೂಜೆ, ಮಹಾಭಾರತಿ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿತ್ತು.ಇದೇ ವೇಳೆ ಬೆಳಗಾವಿ ನಗರ ಸೇರಿದಂತೆ ತಾಲೂಕಿನ ಅಂಗೋಲ್, ಟಿಳಕವಾಡಿ, ಶಹಾಪುರ, ವಡಗಾಂವ, ಕಂಗ್ರಾಳಿ ಖುರ್ದ ಹಾಗೂ ಬುದ್ರಕ್, ವಿಜಯನಗರ, ಜಯನಗರ, ಹಿಂಡಲಗಾ ಮೊದಲಾದ ಉಪನಗರಗಳು ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಪೂಜೆ, ಅಭಿಷೇಕ, ಹೋಮಹವನ, ಮಹಾಪ್ರಸಾದ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಏಕತಾ ಯುವಕ ಮಂಡಳ ವತಿಯಿಂದ ಭವ್ಯವಾದ ವೇದಿಕೆ ನಿರ್ಮಿಸಿ ಅದರ ಮೇಲೆ ಶ್ರೀರಾಮನ ವಿಗ್ರಹವನ್ನು ಇರಿಸಲಾಯಿತು. ಭಕ್ತರು ಈ ಮೂರ್ತಿಯನ್ನು ನೋಡಿ ಭಕ್ತಿ ವ್ಯಕ್ತಪಡಿಸಿದರು. ವ್ಯಾಪಾರ ವಹಿವಾಟು ಸ್ಥಗಿತ: ಅಯೋಧ್ಯೆಯಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ವ್ಯಾಪಾರಸ್ಥರುತಮ್ಮ ವ್ಯಾಪಾರ ವಹಿವಾಟು ಸೋಮವಾರ ಬಂದ್‌ ಮಾಡಿ ಶ್ರೀರಾಮೋತ್ಸವದಲ್ಲಿ ಸಂಭ್ರಮಿಸಿದರು. ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಗಣಪತಿಗಲ್ಲಿ, ಮಾರುತಿಗಲ್ಲಿ, ರವಿವಾರ ಪೇಟೆ, ಶನಿವಾರ ಕೂಟ, ಕಾಕತಿವೇಸ ರಸ್ತೆಗಳಲ್ಲಿನ ಬಹುತೇಕ ಅಂಗಡಿ ಮುಗ್ಗಟ್ಟು ಬಂದ್‌ ಆಗಿದ್ದವು. ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಇಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯಸಾಮಾನ್ಯವಾಗಿತ್ತು. ವ್ಯಾಪಾರಸ್ಥರು ಕೂಡ ಶ್ರೀರಾಮೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಟಿಳಕವಾಜಿಯ ಶ್ರೀರಾಮ ಮಂದಿರದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಶ್ರೀರಾಮ ಮೂರ್ತಿಗೆ ಅಭಿಷೇಕವನ್ನು ನೆರವೇರಿಸಿತು. ಈ ವೇಳೆ ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ, ನಗರ ಸೇವಕರು ಪಾಲ್ಗೊಂಡಿದ್ದರು.