ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ. 92ಕ್ಕೂ ಹೆಚ್ಚು ಅಂಕ ಪಡೆದು, ತಾಲೂಕಿನ ಜನತೆ ಗುರುತಿಸುವಂತಹ ಶಿಕ್ಷಣ ನೀಡಿ, ಅವರ ಮುಂದಿನ ಉನ್ನತ್ತ ಶಿಕ್ಷಣಕ್ಕೆ ಪೂರಕವಾದ ಬುನಾದಿ ಹಾಕಿ ಕೊಡುವಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಬದ್ಧತೆಯ ಕರ್ತವ್ಯದಿಂದಾಗಿ ಸಾಧ್ಯವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ, ಉತ್ತೇಜಿಸುವ ಟ್ರಸ್ಟ್‍ಗಳ ಕಾರ್ಯ ಶ್ಲಾಘನೀಯವೆಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಗೌರವಿಸುವ ಕಾರ್ಯಗಳು ನಡೆದಾಗ ವಿದ್ಯಾರ್ಥಿಗಳ ಕೀಳರಿಮೆಯನ್ನು ಹೋಗಲಾಡಿಸಿ, ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಜತೆಗೆ ಕಲಿಕೆಯ ತುಡಿತವನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಕರನ್ನು ಗೌರವಿಸುವುದು ಅವರ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗುತ್ತದೆ, ಈ ರೀತಿಯ ಕಾರ್ಯಕ್ರಮಗಳು ಪ್ರಶಂಸನೀಯ ಎಂದು ಬಿಇಒ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲೆಯ ಸಭಾಂಗಣದಲ್ಲಿ ನರಸೀಪುರ ದೊಡ್ಡಮನೆ ಸುಜನಾ ಚಾರಿಟಬಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಜುಬಲಿ ಎಜುಕೇಶನ್ ಟ್ರಸ್ಟ್, ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ. 92ಕ್ಕೂ ಹೆಚ್ಚು ಅಂಕ ಪಡೆದು, ತಾಲೂಕಿನ ಜನತೆ ಗುರುತಿಸುವಂತಹ ಶಿಕ್ಷಣ ನೀಡಿ, ಅವರ ಮುಂದಿನ ಉನ್ನತ್ತ ಶಿಕ್ಷಣಕ್ಕೆ ಪೂರಕವಾದ ಬುನಾದಿ ಹಾಕಿ ಕೊಡುವಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಬದ್ಧತೆಯ ಕರ್ತವ್ಯದಿಂದಾಗಿ ಸಾಧ್ಯವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ, ಉತ್ತೇಜಿಸುವ ಟ್ರಸ್ಟ್‍ಗಳ ಕಾರ್ಯ ಶ್ಲಾಘನೀಯವೆಂದರು.ಕೆನರಾ ಬ್ಯಾಂಕ್ ಜುಬಲಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಅನಂತರಾಮ್ ಭಟ್ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದ ಮೌಢ್ಯತೆ ಮತ್ತು ಅರಿವನ್ನು ಮೂಡಿಸಲು ಸಾಧ್ಯ. ದೇಶದ ಪ್ರಗತಿಗೆ ವಿದ್ಯೆ, ಆರೋಗ್ಯ, ಕೌಶಲ್ಯ ಹಾಗೂ ಕಾಯಕ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಕಲಿತ ಯುವ ಜನರಿಗೆ ತರಬೇತಿ ನೀಡಿ, ಉತ್ತೇಜನ ನೀಡುವ ಕಾರ್ಯಗಳು ನಡೆಯುತ್ತಿದ್ದು, ಇದರ ಉಪಯೋಗವನ್ನು ಅಗತ್ಯ ಇರುವವರು ಪಡೆದು, ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಹಲವಾರು ಕ್ಷೇತ್ರದಲ್ಲಿ ಸಾಧಕರನ್ನು ಕಾಣಬಹುದಾಗಿದೆ, ಆಂತಹ ಸಾಧಕರಿಗೆ ಉತ್ತಮ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿ, ಅವುಗಳ ಪಾಲನೆ ಮಾಡುವಂತಹ ಸಂಸ್ಕಾರ ಕಲಿಸುವ ಶಿಕ್ಷಕರ ನಿಸ್ವಾರ್ಥ ಸೇವೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲವೆಂದು ತಿಳಿಸಿದರು. ಟ್ರಸ್ಟ್ ಸದಸ್ಯರಾದ ಅನಂತಮೂರ್ತಿ ಹಾಗೂ ಎನ್. ಎಸ್. ಪ್ರಕಾಶ್ ಮಾತನಾಡಿದರು.ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ.100 ಫಲಿತಾಂಶ ಹಾಗೂ ಎ+ ಶ್ರೇಣಿ ಪಡೆದ 17 ಶಾಲೆಗಳ ಮುಖ್ಯ ಶಿಕ್ಷಕರಿಗೆ ವೈಯಕ್ತಿಕವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಗಳ 29 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಟ್ರಸ್ಟ್ ಸದಸ್ಯರಾದ ಸತ್ಯಾನಂದರಾವ್, ಶೈಲಜಾ, ನಳಿನಿ, ಭಾರತಿ ಗಿರೀಶ್, ಸುಚಿತ, ಅನಂತಮೂರ್ತಿ, ಕಾಂತರಾಜ್, ಇಸಿಒಗಳಾದ ಕೇಶವ, ಆನಂದ, ಕಾಂತರಾಜ್, ನಾಗರಾಜ್, ಬಿಆರ್‌ಸಿ ಪರಶಿವಮೂರ್ತಿ, ಪರಮೇಶ್ ಇತರರು ಇದ್ದರು.