- ಪತ್ರಕರ್ತ, ನೀರಾವರಿ ಹೋರಾಟಗಾರ ಲಕ್ಷ್ಮಣ್ ಹೂಗಾರ್ । ಪತ್ರಿಕಾ ದಿನಾಚರಣೆ

- - -

ಕನ್ನಡಪ್ರಭವಾರ್ತೆ ಜಗಳೂರು

ಮಾಧ್ಯಮ ಕ್ಷೇತ್ರದಲ್ಲಿ ಎಲ್ಲ ವಿಷಯಗಳೂ ನಿರ್ಧಾರವಾಗುವ ''''ಸ್ಟುಡಿಯೋಕ್ರಸಿ'''' ವ್ಯವಸ್ಥೆಯಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಿದೆ. ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಅತಿಯಾದ ಅಡಕೆ ನಾಟಿಯಿಂದಲೂ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿಯಿದೆ ಎಂದು ಹಿರಿಯ ಪತ್ರಕರ್ತ ಹಾಗೂ ನೀರಾವರಿ ಹೋರಾಟಗಾರ ಲಕ್ಷ್ಮಣ್ ಹೂಗಾರ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸದಲ್ಲಿ ಹೇಳಿದರು. ಇಂದಿನ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಏನನ್ನು ಚರ್ಚಿಸಬೇಕು, ಯಾರನ್ನು ಹೇಗೆ ಪ್ರಶ್ನಿಸಬೇಕು ಎಂಬುದನ್ನು ಸ್ಟುಡಿಯೋದಲ್ಲಿ ಕುಳಿತವರೇ ನಿರ್ಧರಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಮಾತ್ರ ಇಂದಿಗೂ ರೈತರು ಮತ್ತು ಹೋರಾಟಗಾರರ ಧ್ವನಿಗೆ ಜಾಗವಿದೆ ಎಂದರು.


೨೦೨೩ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹೫,೩೦೦ ಕೋಟಿ ಘೋಷಿಸಿದ್ದ ಕೇಂದ್ರ ಸರ್ಕಾರ, ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಜಗಳೂರು ಭಾಗಕ್ಕೆ ನೀರು ತರಲು ಶತಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆಯೇ ಹೊರತು, ನೀರು ಮಾತ್ರ ತಲುಪಿಲ್ಲ ಎಂದು ವಿಷಾದಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಪಟ್ಟಣದ ಪತ್ರಕರ್ತರ ಸಮುದಾಯ ಭವನ ನಿರ್ಮಾಣಕ್ಕೆ ₹೧೦ ಲಕ್ಷ ಅನುದಾನ ಮೀಸಲಿದೆ. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಶೇ.೧೧ರಷ್ಟು ತೆರಿಗೆ ಪಾವತಿ ಆಗುತ್ತಿದ್ದರೂ, ಅಪ್ಪರ್ ಭದ್ರಾ ಯೋಜನೆಗೆ ಪ್ರಕಟಿಸಿದ ಹಣ ಬಿಡುಗಡೆ ಆಗದಿರುವುದು ದುರದೃಷ್ಟಕರ ಎಂದರು.

ಪತ್ರಿಕಾ ಭವನ ಪೂರ್ಣಕ್ಕೆ ಸಹಕಾರ:

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ. ಜಗಳೂರು ಪತ್ರಕರ್ತರ ಸಂಘದ ಕಟ್ಟಡಕ್ಕೆ ನಿವೇಶನ ನೀಡಿ, ಜತೆಗೆ ₹೧೦ ಲಕ್ಷ ಅನುದಾನ ನೀಡಲಾಗಿತ್ತು. ಆದರೆ, ಇದುವರೆಗೂ ಕಟ್ಟಡ ಪೂರ್ಣಗೊಂಡಿಲ್ಲವೆಂಬ ವಿಷಯ ತಿಳಿದು ಬೇಸರವಾಗಿದೆ. ನನಗೆ ಅಧಿಕಾರ ಇಲ್ಲದಿದ್ದರೂ ಕಟ್ಟಡ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ.ಪಾಲಯ್ಯ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ತಾಲೂಕು ಸಂಘದ ಅಧ್ಯಕ್ಷ ಲೋಕೇಶ್ ಎಂ. ಐಹೊಳೆ, ನಿಕಟಪೂರ್ವ ಅಧ್ಯಕ್ಷ, ಜಿಲ್ಲಾ ಸಮಿತಿ ಸದಸ್ಯ ಜಿ.ಎಸ್. ಚಿದಾನಂದ, ಡಿ.ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಸುಭಾನ್‌, ಕಾಡಜ್ಜಿ ಮಂಜುನಾಥ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಸವರಾಜ್‌, ರೈತ ಸಂಘದ ಅಧ್ಯಕ್ಷ ಕುಮಾರ್‌ ಇತರರು ಮಾತನಾಡಿದರು.

ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರೀನಾಥ್, ಖಜಾಂಚಿ ವೀರೇಶ್, ಅಣಬೂರು ಮಠದ ಕೊಟ್ರೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ರಾಮಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್‌, ಖಜಾಂಚಿ ಬಾಬು, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ರೈತ ಸಂಘದ ಅಧ್ಯಕ್ಷ ಚಿರಂಜೀವಿ, ಶಾಹೀನಾ ಬೇಗಂ, ಕರವೇ ಅಧ್ಯಕ್ಷ ಮಹಾಂತೇಶ್, ಪತ್ರಕರ್ತ ಎಚ್.ಆರ್. ಬಸವರಾಜ್, ಎಂ.ಸಿ. ಬಸವರಾಜ್‌, ಧನ್ಯಕುಮಾರ್‌, ಎಂ.ಸೋಮನಗೌಡ, ಜೆ.ಒ.ರವಿಕುಮಾರ್‌, ಸಂಘದ ಎಲ್ಲ ಪದಾಧಿಕಾರಿಗಳು, ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

- - -

-೨೭ಜೆ.ಎಲ್‌.ಆರ್‌.ಚಿತ್ರ೧ಎ:

ಪತ್ರಿಕಾ ದಿನ ಕಾರ್ಯಕ್ರಮವನ್ನು ಲಕ್ಷ್ಮಣ್ ಹೂಗಾರ್, ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.