ಸಾರಾಂಶ
ಎಐಕೆಕೆಎಂಎಸ್‌ನಿಂದ ಮಾಯಕೊಂಡದಲ್ಲಿ ನೇತಾಜಿ ಜನ್ಮದಿನ ದಾವಣಗೆರೆ: ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಶುಕ್ರವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ದಾವಣಗೆರೆ ಜಿಲ್ಲಾ ಸಮಿತಿಯಿಂದ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 128ನೇ ಜನ್ಮದಿನ ಆಚರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಈ ಸಂದರ್ಭ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಬ್ರಿಟಿಷರು ಕೇವಲ ದೇಶದಿಂದ ಹೋದರೆ ಸಾಲದು. ಅನಂತರ ಈ ದೇಶದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಹೋಗಬೇಕು, ಇಲ್ಲಿನ ವ್ಯವಸ್ಥೆ ಯಾವ ರೀತಿ ನಿರ್ಮಾಣವಾಗಬೇಕು ಎಂಬ ಕುರಿತು ಸ್ಪಷ್ಟ ಚಿಂತನೆ ಹೊಂದಿದ್ದರು ಎಂದರು.ದೇಶದ ರೈತರು ಮತ್ತು ಕಾರ್ಮಿಕರು ಅಧಿಕಾರ ಹಿಡಿದಾಗ ಮಾತ್ರ ಇಲ್ಲಿನ ಶೋಷಣೆ, ದಬ್ಬಾಳಿಕೆ, ಊಳಿಗಮಾನ್ಯ ಪದ್ಧತಿಗಳನ್ನು ನಾಶ ಮಾಡಲು ಸಾಧ್ಯ. ಹೊಸ ಸಮಸಮಾಜ ಸ್ಥಾಪಿಸಲು ಸಾಧ್ಯ. ಹಾಗಾಗಿ, ರೈತರೇ, ಒಗ್ಗಟ್ಟಾಗಿರಿ, ಇಲ್ಲದಿದ್ದರೆ ನಿಮ್ಮ ಹಕ್ಕುಗಳ ಬೇಡಿಕೆಗಳಿಗೆ ಮನ್ನಣೆ ಸಿಗುವುದಿಲ್ಲ. ನಮಗೆ ಅನ್ನ ನೀಡುವವರು ಹಸಿವಿನಿಂದ ಸಾಯಬೇಕಾಗಿರುವುದು ದುರಂತ. ಈ ದುಸ್ಥಿತಿ ನಿವಾರಿಸಲು ರೈತರು ತಮ್ಮ ನಡುವೆ ಒಕ್ಕೂಟ ವೇದಿಕೆ ಕಟ್ಟಿಕೊಳ್ಳಬೇಕು ಎಂದು 1937ರ ಕಿಸಾನ್ ಸಭೆಯಲ್ಲಿ ನೇತಾಜಿ ಹೇಳಿದ್ದರು. ಇದರಿಂದ ನಾವು ಪಾಠ ಕಲಿತು, ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಇಂದಿನ ಅನ್ಯಾಯ, ಶೋಷಣೆ ದಬ್ಬಾಳಿಕೆ ವಿರುದ್ಧ ಬಲಿಷ್ಠ ರೈತ ಚಳವಳಿ ಕಟ್ಟಲು ರೈತ ಸಂಕುಲ ಮುಂದೆ ಬರಬೇಕು. ಈ ಕಾರ್ಯಕ್ಕೆ ನೇತಾಜಿ ಅವರನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು ಎಂದರು.
ದಾವಣಗೆರೆ ಜಿಲ್ಲಾ ಉಪಾಧ್ಯಕ್ಷ ಎಂ.ಆರ್. ಭೀಮಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ಭೀಮಣ್ಣ ಮಾಯಕೊಂಡ, ರಮೇಶ್, ತಿಪ್ಪಣ್ಣ ಇತರರು ಇದ್ದರು.