ಸಾರಾಂಶ
ಕೊಪ್ಪ, ಜೀವಂತ ಕಲೆಯಾದ ನಾಟಕ ಸಮಾಜವನ್ನು ಜಾಗೃತಿಗೊಳಿಸುವ ಮಾಧ್ಯಮದಂತೆ ಕಾರ್ಯಚರಿಸುವ ಕಲಾ ಪ್ರಕಾರವಾಗಿದೆ ಎಂದು ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೀನೇಶ್ ಇರ್ವತ್ತೂರು ಆಭಿಪ್ರಾಯ ವ್ಯಕ್ತಪಡಿಸಿದರು
ಕನ್ನಡಪ್ರಭ ವಾರ್ತೆ, ಕೊಪ್ಪ
ಜೀವಂತ ಕಲೆಯಾದ ನಾಟಕ ಸಮಾಜವನ್ನು ಜಾಗೃತಿಗೊಳಿಸುವ ಮಾಧ್ಯಮದಂತೆ ಕಾರ್ಯಚರಿಸುವ ಕಲಾ ಪ್ರಕಾರವಾಗಿದೆ ಎಂದು ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೀನೇಶ್ ಇರ್ವತ್ತೂರು ಆಭಿಪ್ರಾಯ ವ್ಯಕ್ತಪಡಿಸಿದರು.ಮಹಿಳಾ ಒಕ್ಕಲಿಗರ ಸಂಘ, ಜಿಲ್ಲಾ ವೈಜ್ಞಾನಿಕ ಪರಿಷತ್ತು, ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಲಾವಿದೆ ಅಕ್ಷತಾ ಪಾಂಡವಪುರ ತಂಡದಿಂದ ಮಂಗಳವಾರ ಬಾಳಗಡಿಯ ದ್ಯಾವೆಗೌಡ ಸಮುದಾಯ ಭವನದಲ್ಲಿ ಆಯೋಜನೆಗೊಂಡ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ರಾಜ್ ಕುಮಾರ್, ಕೆ.ಎಸ್. ಅಶ್ವಥ್, ನರಸಿಂಹ ರಾಜು, ಲೋಕೇಶ್ ಮುಂತಾದ ಮಹಾನ್ ನಟರು ರಂಗಭೂಮಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಾಟಕ ಕಲೆ ಉಳಿಸಿ ಬೆಳೆಸಬೇಕೆನ್ನುವ ಅಕ್ಷತಾ ಪಾಂಡವಪುರರವರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಕೌರಿ ಪ್ರಕಾಶ್ ಊರಿನ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸುವಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದರು.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್ ಮಾತನಾಡಿ ಅಧುನಿಕ ಜಗತ್ತಿನಲ್ಲಿ ನಾಟಕ, ಚಲನಚಿತ್ರ, ನೋಡುಗರನ್ನು ಮೊಬೈಲ್ ಆವರಿಸಿದೆ. ಕಲಾಪ್ರಕಾರಗಳ ಉಳಿವಿಗಾಗಿ ಕಲಾವಿದರು ಇಂದಿನ ಕಾಲಘಟ್ಟಕ್ಕೆ ಬದಲಾಗುವುದು ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮ ವೇದಿಕೆಯಲ್ಲಿ ಅಕ್ಷತಾ ಪಾಂಡವಪುರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷೆ ಶ್ರೀನಿಧಿ ದಿನೇಶ್, ಕಾರ್ಯದರ್ಶಿ ಶೃತಿ ಮಿತ್ರ, ಒಕ್ಕಲಿಗ ಸಂಘದ ಕಾರ್ಯದರ್ಶಿ ವಿ.ಡಿ. ನಾಗರಾಜ್, ವೈಜ್ಞಾನಿಕ ಪರಿಷತ್ತಿನ ಕಾರ್ಯದರ್ಶಿ ಎಚ್.ಎಸ್. ಜಗದೀಶ್, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ರತ್ನಾಕರ್ ಓಣಿತೋಟ, ನಾರ್ವೆ ಅಶೋಕ್ ಮುಂತಾದವರಿದ್ದರು.