ಸಾರಾಂಶ
ಕನ್ನಡ ಪ್ರಭ ವಾರ್ತೆ ಶಿಡ್ಲಘಟ್ಟ / ಚಿಂತಾಮಣಿ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪೋಷಿತ ಉಗ್ರಗಾಮಿಗಳು ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಮೋದಿ ಸರ್ಕಾರ ಪಾಕ್‌ಗೆ ತಕ್ಕ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡಲಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.ಚಿಂತಾಮಣಿ ತಾಲೂಕಿನ ಸೀಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭಯೋತ್ಪಾದನೆಯನ್ನು ಮಟ್ಟಹಾಕದಿದ್ದರೆ ಉಗ್ರರು ಮುಂದಿನ ದಿನಗಳಲ್ಲಿ ಶಿಡ್ಲಘಟ್ಟದಲ್ಲಿಯೂ ಬಾಂಬ್ ಹಾಕುತ್ತಾರೆ ಎಂದರು.
25ರಂದು ಶೋಭಾಯಾತ್ರೆಪ್ರಸ್ತುತ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸಮಸ್ಯೆ ಎದುರಾಗಿದೆ. ಆದರೆ ಇದನೆಲ್ಲಾ ತಡೆಯಲು ಹಿಂದೂಪರ ಸಂಘಟನೆಗಳು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಬೇಕು. ಇದರ ಸಲುವಾಗಿ ಶಿಡ್ಲಘಟ್ಟ ನಗರದಲ್ಲಿ ಮೇ 25 ಭಾನುವಾರ ಬೆಳಿಗ್ಗೆ 11ಗಂಟೆಗೆ ನಡೆಯುವ ಶೋಭಾ ಯಾತ್ರೆಯಲ್ಲಿ ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ಭಾಗಿಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಶ್ರೀರಾಮೋತ್ಸವ ಸಮಿತಿ ವತಿಯಿಂದ 3 ನೇ ವರ್ಷದ ಬೃಹತ್ ಶ್ರೀರಾಮ ಶೋಭಾ ಯಾತ್ರೆಯನ್ನು ಶಿಡ್ಲಘಟ್ಟ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ವತಿಯಿಂದ ಮೇ 25 ಭಾನುವಾರ ಬೆಳಿಗ್ಗೆ 11ಗಂಟೆಗೆ ಹನುಮಂತಪುರ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮ ಶೋಭಯಾತ್ರೆಯು ಚಾಲನೆ ನೀಡಲಾಗುವುದು ಎಂದರು.ನಂತರ ಯಾತ್ರೆಯು ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳ ಮುಖಾಂತರ ತೆರಳಿ ಸರ್ಕಾರಿ ಬಸ್ ನಿಲ್ದಾಣದ ಪಕ್ಕದ ಸಲ್ಲಾಪುರಮ್ಮ ದೇವಸ್ಥಾನದ ರಸ್ತೆಯಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲಾ ಸಮಸ್ತ ಹಿಂದೂ ಬಾಂಧವರು ಭಾಗಿಯಾಗುವಂತೆ ಮನವಿ ಮಾಡಿದರು.
ಹಿಂದುಗಳ ಜಮೀನು ಅನ್ಯರ ಪಾಲುದೇಶದಲ್ಲಿ ಹಿಂದೂ ಸಂಪ್ರದಾಯದ ಮೇಲೆ ಕೆಟ್ಟಕಣ್ಣು ಹಾಕಿದ್ದು ಲವ್ ಜಿಹಾದ್ ಸೇರಿದಂತೆ ಇತರ ಕಾರಣಗಳಿಂದ ಸಾಕಷ್ಟು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರಿ ಜಮೀನುಗಳನ್ನು ಹಾಗೂ ಹಿಂದೂಗಳಿಗೆ ಸೇರಿದ ಜಮೀನುಗಳನ್ನು ಅನ್ಯ ಧರ್ಮಿಯರು ಅಕ್ರಮಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಹಿಂದೂಗಳು ಒಗ್ಗಟ್ಟಾಗಿ ದೇಶದಲ್ಲಿ ಹಿಂದೂ ಸಂಪ್ರದಾಯವನ್ನು ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಶಿಡ್ಲಘಟ್ಟ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಿಂದೂ ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ. ಶೋಭಾ ಯಾತ್ರೆಯ ವೇಳೆ ಪ್ರತಿಯೊಬ್ಬರು ಮನೆಯ ಬಳಿ ಹಸಿರು ತೋರಣ ಕಟ್ಟಿ ವಿಶೇಷ ಪೂಜೆ ಸಲ್ಲಿಸಿ ಪ್ರತಿಯೊಬ್ಬರು ಹಬ್ಬದಂತೆ ಶೋಭಾ ಯಾತ್ರೆಯನ್ನು ಆಚರಣೆ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲಾಧ್ಯಕ್ಷ ಸೀಕಲ್ ಆನಂದಗೌಡ, ಸುರೇಂದ್ರ ಗೌಡ, ಬಜರಂಗದಳ ಜಿಲ್ಲಾ ಸಂಯೋಜಕ ಅಂಬರೀಶ್, ನಗರಸಭೆ ಸದಸ್ಯ ನಾರಾಯಣಸ್ವಾಮಿ ತಾಲೂಕು ಅಧ್ಯಕ್ಷ ಚೆಲುವರಾಜ್, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ಪ್ರಕಾಶ್, ನಗರ ಮಂಡಲ ಅಧ್ಯಕ್ಷ ನರೇಶ್, ಅಶ್ವತಪ್ಪ, ಪುರುಷೋತ್ತಮ್, ಸುಬ್ರಮಣಿ, ರಾಮಕೃಷ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು.