ಸಾರಾಂಶ
ಶಿರಸಿ:
ಶಿರಸಿ-ಹಾವೇರಿ ರಸ್ತೆಯಲ್ಲಿ ಈಗ ಸಂಚಾರವೇ ಕಠಿಣ. ಎಲ್ಲೆಲ್ಲೂ ರಸ್ತೆ ಅಗೆತ, ಹೊಂಡ ದಿನ್ನೆಗಳೇ ತುಂಬಿದ್ದು, ಇಲ್ಲಿಯ ಜನತೆಯ ಅಸಮಾಧಾನ ಬುಧವಾರ ರಸ್ತೆ ತಡೆ ಮೂಲಕ ವ್ಯಕ್ತಗೊಂಡಿತು. ಇತ್ತೀಚೆಗಷ್ಟೇ ಈ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಮೃತಪಟ್ಟ ಮಯೂರ ದಳವಿ ಅವರ ಕುಟುಂಬಕ್ಕೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ 200ಕ್ಕೂ ಅಧಿಕ ಜನ ಬೀದಿಗಿಳಿದಿದ್ದಾರೆ.ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿಯ ಮಳಲಗಾಂವ್ ಕ್ರಾಸ್ ಬಳಿ ಮೂರು ತಾಸಿಗೂ ಅಧಿಕ ಕಾಲ ವಾಹನ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ, ರಸ್ತೆ ಸ್ಥಿತಿ ಸಂಪೂರ್ಣ ಹಾಳಾಗಿ ನಾವು ಸಮಸ್ಯೆ ಎದುರಿಸುತ್ತಿದ್ದರೆ ಅಧಿಕಾರಿಗಳು, ಗುತ್ತಿದಾರರು ಎಸಿ ಕೊಠಡಿಯಲ್ಲಿ ಹಾಯಾಗಿ ಕುಳಿತಿದ್ದಾರೆ. ಪರಿಸರ ರಕ್ಷಿಸಿ, ಅಭಿವೃದ್ಧಿಯನ್ನೂ ಬಯಸುವ ಜನ ನಾವು. ಆದರೆ, ಗುತ್ತಿಗೆದಾರರು ಅರಣ್ಯ ಇಲಾಖೆ ಅನುಮತಿ ಸಿಕ್ಕಿಲ್ಲ ಎಂದು ಸಬೂಬು ಹೇಳುತ್ತ ಇರುವ ರಸ್ತೆಯನ್ನೂ ದುಸ್ಥಿತಿಗೆ ತಂದಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ಜಾಸ್ತಿ ಆಗಿದ್ದರಿಂದ ರಾತ್ರಿಯ ಬೈಕ್ ಸವಾರರು, ಸಣ್ಣ ವಾಹನದಾರರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಗುತ್ತಿಗೆಯ ನಿಯಮದಂತೆ ೨೦೨೪ರ ಮಾರ್ಚ್ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನು ಕೇವಲ ೨ ತಿಂಗಳು ಸಮಯ ಮಾತ್ರ ಇದ್ದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೊನ್ನೆ ನಡೆದ ಅಪಘಾತ, ಮಯೂರ ದಳವಿ ಅವರ ಸಾವಿಗೆ ಹೆದ್ದಾರಿ ಪ್ರಾಧಿಕಾರವೇ ನೇರ ಹೊಣೆಯಾಗಿದೆ. ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದು, ಕುಟುಂಬಕ್ಕೆ ಆಸರೆಯೇ ಈಗ ಇಲ್ಲದಂತಾಗಿದೆ. ಗುತ್ತಿಗೆದಾರರು ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಪ್ರಮುಖ ಸಿ.ಎಫ್. ನಾಯ್ಕ ಮಾತನಾಡಿ, ಕಳೆದ ಮೂರು ವರ್ಷದ ಹಿಂದೆಯೇ ಈ ರಸ್ತೆ ಗುತ್ತಿಗೆ ನೀಡಲಾಗಿದೆ. ಉತ್ತರ ಕನ್ನಡಕ್ಕೆ ಸಂಬಂಧಿಸಿದಂತೆ ೫೦ ಕಿಮೀ ಮಾರ್ಗದಲ್ಲಿ ಇದುವರೆಗೆ ಕೇವಲ ೩ ಕಿಮೀ ಮಾತ್ರ ರಸ್ತೆ ಆಗಿದ್ದು, ಹೇಳಿ ಕೇಳುವವರೇ ಇಲ್ಲದಂತಾಗಿದೆ. ರಸ್ತೆಯ ಸ್ಥಿತಿ ನೋಡಲಾಗದೇ ಶಾಸಕ ಭೀಮಣ್ಣ ನಾಯ್ಕ ಸ್ವಂತ ಖರ್ಚಿನಲ್ಲಿ ರಸ್ತೆ ಹೊಂಡ ತುಂಬಿದರೂ ಹೆದ್ದಾರಿ ಪ್ರಾಧಿಕಾರ ಮೌನವಾಗಿ ಕುಳಿತಿರುವುದು ಆಶ್ಚರ್ಯ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುನೀಲ ನಾಯ್ಕ ಮಳಲಗಾಂವ ಇದ್ದರು.ಸ್ಥಳದಲ್ಲೇ ಪರಿಹಾರ ಘೋಷಿಸಿ...
ಶಿರಸಿ ಉಪ ವಿಭಾಗಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರಬೇಕು. ಇಲ್ಲಿಯ ಸ್ಥಿತಿ ಗಮನಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ರಸ್ತೆ ಗುತ್ತಿಗೆದಾರರು ಸ್ಥಳದಲ್ಲಿಯೇ ಮೃತ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಪಟ್ಟು ಹಿಡಿದರು. ಇದಾವುದಕ್ಕೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಹುಬ್ಬಳ್ಳಿ ರಸ್ತೆ ತಡೆಗೂ ಪ್ರತಿಭಟನಾಕಾರರು ಮುಂದಾದರು. ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ರಮೇಶ ಹೆಗಡೆ ಹಾಗೂ ಗುತ್ತಿಗೆದಾರ ಕಂಪನಿ ಅಮ್ಮಾಪುರ ಲನ್ಸ್ಟ್ರಕ್ಷನ್ ನ ಪ್ರಮುಖರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮೃತ ಕುಟುಂಬ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸೂಕ್ತ ಪರಿಹಾರ ನಿರ್ಧರಿಸುವುದಾಗಿ ತಿಳಿಸಿದರು.