ಸಾರಾಂಶ
ಹಾಸನ: ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸುಳ್ಳನ್ನು ಸತ್ಯ ಮಾಡಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಸರ್ಕಾರ ಅಸ್ಥಿರಗೊಳಿಸಿ ಮತ್ತೊಮ್ಮೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸುವ ಉತ್ಸಾಹದಲ್ಲಿ ಇದ್ದರು. ಆದರೆ, ಉಪ ಚುನಾವಣೆ ಫಲಿತಾಂಶ ಅವರ ಈ ಕನಸನ್ನು ಮೂಲೆಗುಂಪು ಮಾಡಿದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಜೊತೆಗೆ ಸ್ಪರ್ಧೆ ಮಾಡಿತ್ತು. ಎಲ್ಲಾ ಸುಳ್ಳನ್ನು ಬಿತ್ತರಿಸಿ ಸತ್ಯ ಮಾಡಲು ಹೊರಟಿದ್ದರು. ಬಿಜೆಪಿ-ಜೆಡಿಎಸ್ ಅವರ ಕೀಳುಮಟ್ಟದ ನಡೆ, ಸರ್ವಾಧಿಕಾರಿ ನಡೆಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಜನರು ನಮಗೆ ಬೆಂಬಲ, ಆಶೀರ್ವಾದ ಕೊಟ್ಟಿದ್ದಾರೆ. ಈ ಚುನಾವಣೆ ನೇರವಾಗಿ ಉತ್ತರ ಕೊಟ್ಟಿದೆ. ಇಲ್ಲಸಲ್ಲದ ಆರೋಪ ಮಾಡಬೇಡಿ, ಪ್ರಾಮಾಣಿಕ ವ್ಯಕ್ತಿಗೆ ಮಸಿ ಬಳಿಯಬೇಡಿ. ಸಿಎಂ, ಡಿಸಿಎಂ ಎಲ್ಲರ ಪರಿಶ್ರಮದಿಂದ ಫಲಿತಾಂಶ ಬಂದಿದೆ ಎಂದರು.ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಮಾಡಲು ಅವರ ಅಭಿಮಾನಿಗಳು ಭೇಟಿ ಮಾಡಿ ಕೇಳಿದರು. ಇದು ಸರ್ಕಾರ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಸ್ವಾಭಿಮಾನಿ ಸಂಘದ ಸದಸ್ಯರು ಸಮಾವೇಶ ಮಾಡಲು ಹೊರಟಿದ್ದಾರೆ. ಅವರಿಗೆ ಬೆಂಬಲ ಕೊಡಲು ನಾವು ಸಿದ್ಧರಿದ್ದೇವೆ. ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳನ್ನೊಳಗೊಂಡು ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ. ಸಾಮಾಜಿಕ ಚಳವಳಿ ಸಂಘಟನೆಗೆ ಒತ್ತು ಕೊಡಲು ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಹದಿನಾಲ್ಕು ಬಜೆಟ್ ಕೊಟ್ಟಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಬೆಂಬಲ ಹಾಗೂ ಧನ್ಯವಾದ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರೇ ಒಂದು ಶಕ್ತಿ. ರಾಜಕೀಯ ಕಾರ್ಯಕ್ರಮಗಳು ಈ ಸಮಾವೇಶಕ್ಕೆ ಸಂಬಂಧವಿಲ್ಲ. ಅಭಿಮಾನ ಜೋತಕದ ಸಮಾವೇಶ ಇದು ಎಂದು ಹೇಳಿದರು.