ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜನರಿಂದ ಆಯ್ಕೆಯಾಗಿ ಜನಸಾಮಾನ್ಯರಿಗೆ ಸ್ಪಂದಿಸಿ ಮೂಲಭೂತ ಸೌಕರ್ಯ ಕಲ್ಪಿಸುವುದೆ ಒಬ್ಬ ಜನಪ್ರತಿನಿಧಿಯ ಮುಖ್ಯ ಕೆಲಸ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ಭಾನುವಾರ ತಾಲೂಕಿನ ಗೊಲ್ಲಹಳ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಪನಹಳ್ಳಿ ಗ್ರಾಮದಲ್ಲಿ ತೋಟ, ಹೊಲ ಗದ್ದೆಗಳಿಗೆ ಸಂಪರ್ಕ ರಸ್ತೆಗೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಸ್ತೆ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚಕಳೆದ ಮಾಸದಲ್ಲಿ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಇಟಪನಹಳ್ಳಿ ಗ್ರಾಮಕ್ಕೆ ಬಂದಿದ್ದಾಗ ಗ್ರಾಮದಿಂದ ತೋಟ, ಹೊಲ ಗದ್ದೆಗಳಿಗೆ ತೆರಳಲು ಸರಿಯಾದ ರಸ್ತೆ ಸಂಪರ್ಕವಿಲ್ಲದೇ ಬೆಳೆದ ಬೆಳೆಯನ್ನು ತರಲು ಸಾಧ್ಯವಾಗುತ್ತಿರಲಿಲ್ಲ. ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆಗ ಸ್ಥಳದಲ್ಲೇ 15 ಲಕ್ಷ ರು.ಗಳ ವೆಚ್ಚದಲ್ಲಿ ಈಗ ರಸ್ತೆ ಕಾಮಗಾರಿ ಮುಗಿದು ಲೋಕಾರ್ಪಣೆಯಾಗಿದೆ ಎಂದರು.
ಶೌಚಾಲಯ ನಿರ್ಮಿಸುವ ಭರವಸೆಗ್ರಾಮದ ಪರಿಶಿಷ್ಟರ ಕಾಲೋನಿಗೆ ಶೌಚಾಲಯವಿಲ್ಲವೆಂದು ಈ ಕಾಲೋನಿಯ ಜನರು ಬೇಡಿಕೆ ಇಟ್ಟಿದ್ದಾರೆ. ಅನುದಾನ ಬಂದ ನಂತರ ಗ್ರಾಮಕ್ಕೆ ಬಂದು ಶೌಚಾಲಯಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತೇನೆ. ಹಾಗೇಯೇ ಗ್ರಾಮದಲ್ಲಿ ರಸ್ತೆ ಚರಂಡಿಗಳಿಗೂ ಶಂಕುಸ್ಥಾಪನೆ ನೆರವೇರಿಸುತ್ತೇನೆ. ಕ್ಷೇತ್ರದ ಮೂಲೆ ಮೂಲೆಗಳ ಕುಗ್ರಾಮಗಳಿಗೆ ಭೆಟಿ ನೀಡುವುದರಿಂದ ಅಲ್ಲಿನ ಜನತೆಯ ಸಮಸ್ಯೆ ಅರಿತು ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ,ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ ರೆಡ್ಡಿ, ನಿವೃತ್ತ ಪಿಎಸ್ಐ ಹೆಚ್.ನಂಜುಂಡಯ್ಯ, ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ಪೆರೆಸಂದ್ರ ರಮೇಶ್ ಬಾಬು, ಪೆದ್ದಣ್ಣ, ನಾಸ್ತಿಮ್ಮನಹಳ್ಳಿ ಹರೀಶ್,ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಡೈರಿ ಗೋಪಿ,ಅಣ್ಣಮ್ಮ, ವಿನಯ್ ಬಂಗಾರಿ, ಮತ್ತಿತರರು ಇದ್ದರು.