ದುರ್ಬಲರಿಗೆ ಕಂದಾಯ ಇಲಾಖೆ ಸೇವೆ ಗಗನಕುಸುಮ

| Published : Nov 04 2024, 12:22 AM IST

ಸಾರಾಂಶ

ಕಂದಾಯ ಇಲಾಖೆಗೆ ಒಳಪಡುವ ಸೇವೆಗಳು ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಿಗಬೇಕು ಎಂಬ ಉದ್ದೇಶದಿಂದ ಈ ಹಿಂದೆ ಇದ್ದ ಶಾಸಕ ಎಚ್.ಕೆ ಕುಮಾರಸ್ವಾಮಿ ಅವಧಿಯಲ್ಲಿ ನೆಲ ಮತ್ತು 2 ಅಂತಸ್ತುಗಳು ಒಳಗೊಂಡಂತೆ ಸುಮಾರು 8 ಕೋಟಿ ರು.ವೆಚ್ಚದ ಮೂರು ಅಂತಸ್ತಿನ ಕಟ್ಟಡವನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಕಟ್ಟಡ ಕಾಮಗಾರಿಯು ಈಗ ಮುಕ್ತಾಯಗೊಂಡು ಪ್ರಸ್ತುತ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಆದರೆ ತಾಲೂಕಿನಲ್ಲಿ ಕಂದಾಯ ಇಲಾಖೆ ಅಡಿಯಲ್ಲಿ ಬರುವ ಸೇವೆಗಳು ಅಂಗವಿಕಲರು ಮತ್ತು ವೃದ್ಧರಿಗೆ ಕೈಗೆಟುಕದೆ ಗಗನ ಕುಸುಮವಾಗಿರುವುದು ವಿಪರ್ಯಾಸವೆ ಸರಿ.

ಕನ್ನಡಪ್ರಭ ವಾರ್ತೆ ಆಲೂರು

ಕಂದಾಯ ಇಲಾಖೆಗೆ ಒಳಪಡುವ ಸೇವೆಗಳು ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಿಗಬೇಕು ಎಂಬ ಉದ್ದೇಶದಿಂದ ಈ ಹಿಂದೆ ಇದ್ದ ಶಾಸಕ ಎಚ್.ಕೆ ಕುಮಾರಸ್ವಾಮಿ ಅವಧಿಯಲ್ಲಿ ನೆಲ ಮತ್ತು 2 ಅಂತಸ್ತುಗಳು ಒಳಗೊಂಡಂತೆ ಸುಮಾರು 8 ಕೋಟಿ ರು.ವೆಚ್ಚದ ಮೂರು ಅಂತಸ್ತಿನ ಕಟ್ಟಡವನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಕಟ್ಟಡ ಕಾಮಗಾರಿಯು ಈಗ ಮುಕ್ತಾಯಗೊಂಡು ಪ್ರಸ್ತುತ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಆದರೆ ತಾಲೂಕಿನಲ್ಲಿ ಕಂದಾಯ ಇಲಾಖೆ ಅಡಿಯಲ್ಲಿ ಬರುವ ಸೇವೆಗಳು ಅಂಗವಿಕಲರು ಮತ್ತು ವೃದ್ಧರಿಗೆ ಕೈಗೆಟುಕದೆ ಗಗನ ಕುಸುಮವಾಗಿರುವುದು ವಿಪರ್ಯಾಸವೆ ಸರಿ.

ತಾಲೂಕು ಕೇಂದ್ರವಾಗಿರುವ ಆಲೂರಿನಲ್ಲಿ ಕಂದಾಯ ಇಲಾಖೆಗೆ ಸುಸಜ್ಜಿತವಾದ ಮೂರು ಅಂತಸ್ತಿನ ವಿಶಾಲವಾದ ತಾಲೂಕು ಆಡಳಿತ ಸೌಧದ ಕಟ್ಟಡವನ್ನು ನಿರ್ಮಾಣ ಮಾಡಿರುವುದು ಸರಿಯಷ್ಟೇ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂದಾಯ ಇಲಾಖೆಯ ಸೇವೆಗಳು ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮರೀಚಿಕೆಯಾಗಿದೆ ಎಂದರೆ ತಪ್ಪಾಗಲಾರದು. ಕಾರಣ ತಹಸೀಲ್ದಾರ್ ಮತ್ತು ಗ್ರೇಡ್ -2 ತಹಸೀಲ್ದಾರ್‌ ಕೊಠಡಿಗಳು, ತಾಲೂಕಿನ ಎಲ್ಲಾ ವೃತ್ತಗಳ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರಾಜ್ಯಸ್ವ ನಿರೀಕ್ಷಕರ ಕಚೇರಿಗಳು, ಚುನಾವಣೆ ಶಾಖೆ, ಜನನ ಮರಣ ನೊಂದಣಿ ಕಚೇರಿ, ತಹಸೀಲ್ದಾರ್‌ ನ್ಯಾಯಾಲಯ ಆವರಣ, ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಇರುವುದರಿಂದ ಮೊದಲ ಮಹಡಿಗೆ ಮೆಟ್ಟಲುಗಳನ್ನು ಹೊತ್ತುಕೊಂಡು ಹೋಗಲು ವೃದ್ಧರು ಮತ್ತು ಅಂಗವಿಕಲರು ಹರಸಾಹಸ ಪಡುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಸಮಸ್ಯೆ ಒಂದು ಕಡೆಯಾದರೆ ಸರ್ವೇ ಇಲಾಖೆಯ ಸೇವೆಗಳನ್ನು ಪಡೆಯಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ತಾಲೂಕು ಸರ್ವೇಯರ್‌ಗಳು ಹಾಗೂ ಸರ್ವೆ ಸೂಪರಿಡೆಂಟ್‌ಗಳ ಕಚೇರಿಗಳು ಇದೇ ಕಟ್ಟಡದ ಎರಡನೇ ಮಹಡಿಯಲ್ಲಿ ಇರುವುದರಿಂದ ಈ ಕಚೇರಿಗೂ ಕೂಡ ವೃದ್ಧರು ಮತ್ತು ಅಂಗವಿಕಲರು ತಮ್ಮ ಕೆಲಸಗಳಿಗೆ ಭೇಟಿ ನೀಡಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ.

ಅಂದರೆ ಈ ಕಟ್ಟಡದಲ್ಲಿ ಮೊದಲ ಮತ್ತು ಎರಡನೇ ಮಹಡಿಗೆ ಹೋಗಲು ಎರಡು ಕಡೆ ಮೆಟ್ಟಿಲುಗಳ ವ್ಯವಸ್ಥೆ ಇರುವುದು ಸರಿ. ಆದರೆ ಈ ಎರಡು ಕಚೇರಿಗಳಿಗೆ 40-50 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದು ವೃದ್ಧರಿಗೆ ಮತ್ತು ಅಂಗವಿಕಲರಿಗೆ ಸವಾಲಿನ ಕೆಲಸವಾಗಿದೆ. ಆದುದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಈ ಕಚೇರಿಗೆ ಮೊದಲ ಮತ್ತು ಎರಡನೇ ಮಹಡಿಗೆ ಹೋಗಲು ಅನುಕೂಲವಾಗುವಂತೆ ಲಿಫ್ಟ್‌ನ ವ್ಯವಸ್ಥೆ ಮಾಡಿಕೊಡಬೇಕಾಗಿ ಸಾರ್ವಜನಿಕರಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ಶಾಸಕ ಸಿಮೆಂಟ್ ಮಂಜು ಅವರನ್ನು ಈ ಸಮಸ್ಯೆ ಬಗ್ಗೆ ಪತ್ರಿಕೆಯು ಕೇಳಿದಾಗ ಈಗಾಗಲೇ ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಸುಸಜ್ಜಿತ ಕಟ್ಟಡಕ್ಕೆ ಲಿಫ್ಟ್ ಅನ್ನು ಅಳವಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಲಿಫ್ಟ್ ಅನ್ನು ಅಳವಡಿಸುವುದಾಗಿ ಭರವಸೆ ನೀಡಿದರು ಭೈರಾಪುರ ಗ್ರಾ.ಪಂ ಮಾಜಿ ಅಧ್ಯಕ್ಷರಾದ ದೇವರಾಜು ಮಾತನಾಡಿ, ತಹಸೀಲ್ದಾರ್‌ ಮತ್ತು ಗ್ರೇಡ್ -2 ತಹಸೀಲ್ದಾರ್‌ ಕೊಠಡಿಗಳು, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ರಾಜಸ್ವ ನಿರೀಕ್ಷಕರ ಕಚೇರಿ, ಸರ್ವೆ ಇಲಾಖೆಗಳಲ್ಲಿ ನಮ್ಮ ಕೆಲಸಗಳನ್ನ ಮಾಡಿಸಿಕೊಳ್ಳಲು ಮೆಟ್ಟಿಲುಗಳನ್ನು ಹತ್ತಿ ಹೋಗುವುದಕ್ಕೆ ತುಂಬಾ ಕಷ್ಟವಾಗುತ್ತಿದ್ದು ನಮ್ಮಂತ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಲಿಫ್ಟ್‌ನ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು. ಜಿಲ್ಲಾ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಎಚ್.ಬಿ ಧರ್ಮರಾಜು ಮಾತನಾಡಿ, ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗಿದೆ. ಆದರೆ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮೊದಲ ಮತ್ತು ಎರಡನೇ ಮಹಡಿ ಮೆಟ್ಟಿಲುಗಳನ್ನು ಹತ್ತಿ ಹೋಗುವುದು ದುಸ್ತರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಲಿಫ್ಟ್ ವ್ಯವಸ್ಥೆಯನ್ನು ಶೀಘ್ರದಲ್ಲಿ ಕಲ್ಪಿಸಬೇಕಾಗಿ ಒತ್ತಾಯಿಸುತ್ತೇವೆ ಎಂದರು.