ಸಾರಾಂಶ
ಮೋದಿ ಭಾವ ಚಿತ್ರ ಹಾಕಬೇಕಾಗಿತ್ತು, ಅಧಿಕಾರಿಗಳ ಕಣ್ತಪ್ಪಿನಿಂದ ಈ ರೀತಿಯಾಗಿದೆಯೆಂದು ಸಮಾಜಾಯಿಷಿ ನೀಡಿದ ಡಾ.ಎಂ.ಸಿ.ಸುಧಾಕರ್ ಈ ಯೋಜನೆ ಕೇಂದ್ರ ಸರ್ಕಾರದಾದರೂ ಅನುಷ್ಟಾನ ಮಾಡುವುದು ರಾಜ್ಯ ಸರ್ಕಾರವೆಂದು ತಿರುಗೇಟು ನೀಡಿದರು.
ಚಿಂತಾಮಣಿ : ಮೋದಿ ಭಾವ ಚಿತ್ರ ಹಾಕಬೇಕಾಗಿತ್ತು, ಅಧಿಕಾರಿಗಳ ಕಣ್ತಪ್ಪಿನಿಂದ ಈ ರೀತಿಯಾಗಿದೆಯೆಂದು ಸಮಾಜಾಯಿಷಿ ನೀಡಿದ ಡಾ.ಎಂ.ಸಿ.ಸುಧಾಕರ್ ಈ ಯೋಜನೆ ಕೇಂದ್ರ ಸರ್ಕಾರದಾದರೂ ಅನುಷ್ಟಾನ ಮಾಡುವುದು ರಾಜ್ಯ ಸರ್ಕಾರವೆಂದು ತಿರುಗೇಟು ನೀಡಿದರು.
ಚಿಂತಾಮಣಿಯಲ್ಲಿ16.63 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 50 ಹಾಸಿಗೆಗಳ ತುರ್ತು ನಿಗಾ ಘಟಕದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ ಈ ಘಟಕವು ಜಿಲ್ಲಾ ಕೇಂದ್ರದಲ್ಲಿ ಇರಬೇಕೆಂಬ ನಿಯಮವಿದೆಯಾದರೂ ಚಿಂತಾಮಣಿ ತಾಲ್ಲೂಕು ಅವಿಭಜಿತ ಜಿಲ್ಲೆಯಲ್ಲೇ ದೊಡ್ಡ ತಾಲ್ಲೂಕಾಗಿದ್ದು ನೆರೆಯ ಶ್ರೀನಿವಾಸಪುರ, ಚೇಳೂರು, ಶಿಡ್ಲಘಟ್ಟ ಹಾಗೂ ಕೋಲಾರ ಭಾಗದ ಸಾರ್ವಜನಿಕರು ತಮ್ಮ ದಿನನಿತ್ಯದ ಅಗತ್ಯ ಹಾಗೂ ಆರೋಗ್ಯ ಸೇವೆಗೆ ಚಿಂತಾಮಣಿಗೆ ಬರುವ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮವಹಿಸಿ, ಈ ಭಾಗದ ಎಲ್ಲರಿಗೂ ಅನುಕೂಲವಾಗುತ್ತದೆಯೆಂಬ ನಿಟ್ಟಿನಲ್ಲಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆಂದರು.
ಸೊಮ್ಮು ಒಕ್ಕರದಿ ಸೋಕು ಒಕ್ಕರದಿಯೆಂಬಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸಿಕೊಳ್ಳುತ್ತಾರೆಂದು ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ ಸುಧಾಕರ್ ಈ ಜಾಗ ನಗರಸಭೆಗೆ ಸೇರಿದ ಜಾಗವಾಗಿದ್ದು, ಆಸ್ಪತ್ರೆಯ ನಿರ್ಮಾಣಕ್ಕೆ ಹಸ್ತಾಂತರಿಸಲು ಸಾಕಷ್ಟು ಶ್ರಮವಹಿಸಲಾಗಿದೆಯೆಂದರು.
ಸಂಸದ ಮಲ್ಲೇಶ್ ಬಾಬುರಿಗೂ ನನಗೂ ವೈಯುಕ್ತಿಕವಾಗಿ ಒಳ್ಳೆಯ ಸಂಬಂಧವಿದೆ, ಆದರೆ ಕೆಲವರು ರಾಜಕೀಯ ಕಾರಣಗಳಿಗಾಗಿ ಸಂಸದರನ್ನು ಪ್ರಚೋದಿಸಿ ಕಳುಹಿಸಿದ್ದಾರೆ. ಸಂಸದರು ಎನ್‌ಡಿಎ ಭಾಗವಾಗಿರುವುದರಿಂದ ಈ ರೀತಿ ಮಾತನಾಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿರುವುದು ಹಾಲಿ ಮತ್ತು ಮಾಜಿ ಸಂಸದರಿಗೆ ಗೊತ್ತಿಲ್ಲ ಎಂದರು.
ಕೆಜಿಎಫ್ ನಿಂದ ಬಾಗೇಪಲ್ಲಿವರೆಗೂ ಹೆದ್ದಾರಿ ನಿರ್ಮಿಸಬೇಕೆಂದು ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿರೊಂದಿಗೆ ಮಾತನಾಡಿದ್ದೇನೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಹ ಮಾತನಾಡಿದ್ದಾರೆ. ಕೆಲಸ ಆಗಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಸುಮ್ಮನೆ ಕುಳಿತಿಲ್ಲ, ಇದರ ಬೆನ್ನುಬಿದ್ದಿದ್ದೇನೆ.
ಮಹಿಳಾ ಕಾಲೇಜಿನ ಅಭಿವೃದ್ಧಿಗೆ ೨೩ಕೋಟಿ ೫೦ಲಕ್ಷ, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್ ಹಾಗೂ ಸ್ಟೇಡಿಯಂ ಅಭಿವೃದ್ಧಿಗೆ ಸರಿಸುಮಾರು ಒಟ್ಟು 58 ಕೋಟಿ ರೂಗಳ ವೆಚ್ಚದಲ್ಲಿ ಅನುದಾನ ತಂದಿದ್ದು ಅಭಿವೃದ್ಧಿ ಪಡಿಸುತ್ತಿದ್ದೇನೆಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಚಿಂತಾಮಣಿಯಲ್ಲಿ ೫೦ ಹಾಸಿಗೆಗಳ ತ್ರೀವ ನಿಗಾ ಆರೈಕ ಘಟಕವನ್ನು ಕೇಂದ್ರ ಸರ್ಕಾರದ ಶೇಕಡಾ 60 ಹಾಗೂ ರಾಜ್ಯ ಸರ್ಕಾರದ ಶೇಕಡಾ ೪೦ ಅನುದಾನದೊಂದಿಗೆ ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಿಗಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ಮಹೇಶ್‌ಕುಮಾರ್, ಟಿಹೆಚ್‌ಒ ರಾಮಚಂದ್ರರೆಡ್ಡಿ, ಆಡಳಿತವೈದ್ಯಾಧಿಕಾರಿ ಡಾ.ಸಂತೋಷ್, ತಹಶೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಬಿಇಒ ಉಮಾದೇವಿ, ಪೌರಾಯುಕ್ತ ಜಿ.ಎನ್.ಚಲಪತಿ, ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಂಗಮಶಿಗೇಹಳ್ಳಿ ಮುನಿನಾರಾಯಣಪ್ಪ, ಸಾರ್ವಜನಿಕ ಆಸ್ಪತ್ರೆ ಅಭಿವೃದ್ಧಿ ಸಮಿತಿಯ ಎಸ್.ಸುಬ್ರಮಣ್ಯಂ, ನಗರಸಭಾ ಅಧ್ಯಕ್ಷ ಜಗನ್ನಾಥ್, ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.