ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ಜಾನುವಾರುಗಳನ್ನು ಕದಿಯಲು ಬಂದಿದ್ದ ನಾಲ್ವರ ಪೈಕಿ ಮೂವರನ್ನು ಹಿಡಿದ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿ, ಆರೋಪಿಗಳನ್ನು ವಶಕ್ಕೆ ಪಡೆಯಲು ಆಗಮಿಸಿದ ಹಳ್ಳಿಮೈಸೂರು ಠಾಣೆ ಪಿಎಸ್ಸೈ ಸಲ್ಮಾನ್ ಖಾನ್ ತಂಬುಳಿ ಅವರಿಗೆ ಒಪ್ಪಿಸಲು ನಿರಾಕರಿಸಿ, ಪ್ರತಿಭಟನೆ ನಡೆಸಿದರು.ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದ ಮಹಮ್ಮದ್ ಶಫಿ, ಜಬಿವುಲ್ಲಾ ಮತ್ತು ಪುನೀತ್ ಎಂಬ ಆರೋಪಿಗಳು ಟಾಟಾ ಎಸಿ ವಾಹನದಲ್ಲಿ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಗ್ರಾಮದ ರಾಮು ಎಂಬುವವರ ಮನೆಯ ಎಮ್ಮೆ ಕದ್ದ ನಂತರ ಮೂಡಲಮಾಯಿಗೌಡನಹಳ್ಳಿ ಗ್ರಾಮದಲ್ಲಿ ಕೈಚಳಕ ತೋರಲು ಮುಂದಾಗಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಹಿಡಿದು ವಿಚಾರಿಸಿದಾಗ ಜಾನುವಾರು ಕದಿಯಲು ಬಂದಿದ್ದೆಂದು ಗೊತ್ತಾಗಿ ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೂಡಲಮಾಯಗೋಡನಹಳ್ಳಿ ರಾಜು ಮಾತನಾಡಿ, ಐದಾರು ಹಳ್ಳಿಗಳಲ್ಲಿ ಕುರಿಗಳು, ಆಡುಗಳು, ಹಸು ಹಾಗೂ ಎತ್ತುಗಳು, ಎಮ್ಮೆಗಳನ್ನು ಕಳ್ಳತನ ಮಾಡಿದ ಸಂಬಂಧ ಹಳ್ಳಿಮೈಸೂರು ಠಾಣೆಯಲ್ಲಿ ದೂರುಗಳು ದಾಖಲಾಗಿದೆ ಎಂದರು.ಸಾಲಿಗ್ರಾಮ ಹೋಬಳಿಯ ಮೇಲೂರು ಗ್ರಾಮದ ಅಭಿ ಎಂಬುವರು ಮಾತನಾಡಿ, ಇವರ ವಾಹನದ ನಂಬರ್ ಪ್ಲೇಟ್ ಮೇಲೆ ಲೈಟ್ ಅಳವಡಿಸಿದ್ದು, ವಾಹನದ ನಂಬರ್ ಕಾಣುವುದಿಲ್ಲ. ನಮ್ಮ ಗ್ರಾಮದಲ್ಲಿ ನಡೆದ ಕಳ್ಳತನ ಪತ್ತೆ ಮಾಡುವ ಸಲುವಾಗಿ ಹತ್ತಾರು ಸಿಸಿ ಕ್ಯಾಮರಾ ಪರಿಶೀಲಿಸಿ, ವಾಹನದ ನಂಬರ್ ಸಮೇತ ದಾಖಲೆ ಕೊಟ್ಟರೂ ಪೊಲೀಸರು ಹಿಡಿದಿರಲಿಲ್ಲ. ಇವರ ವಾಹನದಲ್ಲಿ ಲಾಂಗು, ಮಚ್ಚು ಹಾಗೂ ಹರಿತವಾದ ಆಯುಧಗಳು ಇದ್ದು, ಕಳ್ಳತನ ಮಾಡಲು ಹೋದಾಗ ಯಾರಾದರೂ ಇವರನ್ನು ಹಿಡಿಯಲು ಬಂದರೆ ಹಲ್ಲೆ ನಡೆಸುವ ಸಲುವಾಗಿ ಆಯುಧಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಮ್ಮೆಗಳು, ಹಸುಗಳು, ಎತ್ತುಗಳು, ಟಗರುಗಳು, ಕುರಿಗಳನ್ನು ಕಳೆದುಕೊಂಡಿದ್ದ ಹತ್ತಾರು ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಜಾನುವಾರುಗಳ ಕಳ್ಳತನದಿಂದ ರೋಸಿ ಹೋಗಿದ್ದ ಹತ್ತಾರು ಹಳ್ಳಿಗಳ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದು, ಕಳ್ಳತನಗಳ ಬಗ್ಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಹಳ್ಳಿಮೈಸೂರು ಠಾಣೆ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೀಸಲು ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ವೃತ್ತ ನಿರೀಕ್ಷಕರು ತೋರಿದ ಸಮಯ ಪ್ರಜ್ಞೆಯಿಂದ ವಾತಾವರಣ ತಿಳಿಗೊಳಿಸಿ, ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಕರೆತಂದರು.ಇದೇ ರೀತಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿಯೂ ಜಾನುವಾರುಗಳ ಕಳ್ಳತನ ಹೆಚ್ಚಿರುವ ಬಗ್ಗೆ ವರದಿಗಳಿದೆ. ಆಲೂರು ತಾಲೂಕಿನ ಹಲವೆಡೆಯೂ ಮೇಯಲು ಕಟ್ಟಿದ್ದ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕೆಲ ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ. ಸಾಲಿಗ್ರಾಮ ಹೋಬಳಿಯ ಮೇಲೂರು ಗ್ರಾಮದಲ್ಲಿ ನಡೆದ ದನಗಳ ಕಳ್ಳತನದ ಬಗ್ಗೆ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದರೂ ಯಾವ ಕ್ರಮ ಕೈಗೊಂಡಿಲ್ಲ. ಹಾಗೆಯೇ ಹಳ್ಳಿಮೈಸೂರು ಪೊಲೀಸರಿಗೂ ದೂರು ನೀಡಿದ್ದರೂ ಶಿಸ್ತು ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ದನಗಳ್ಳರು ತಮ್ಮ ಕರಾಮತ್ತು ಮುಂದುವರೆಸಿದ್ದು, ಇದರ ನಷ್ಟ ಮಾತ್ರ ರೈತರದ್ದಾಗಿದೆ.
ಈ ನಡುವೆಯೇ ಸಿಕ್ಕಿಬಿದ್ದಿರುವ ಆರೋಪಿಗಳ ಪೈಕಿ ಒಬ್ಬಾತ ನೋಡ್ತಾ ಇರಿ ಕೆಲವೇ ದಿನಗಳಲ್ಲಿ ಹೊರಗೆ ಬರ್ತೀನಿ ಅಂತ ಹೇಳಿರುವುದು ವ್ಯವಸ್ಥೆಯಲ್ಲಿರುವ ಲೋಪದೋಷಗಳಿಗೆ ಹಿಡಿದ ಕೈಗನ್ನಡಿಯಾಗಿದೆ.-------------------------------------------------
* ಬಾಕ್ಸ್ ಐಟಂಇದೀಗ ಸಿಕ್ಕಿಬಿದ್ದಿರುವ ಮೂವರ ಪೈಕಿ ಮಹಮ್ಮದ್ ಶಫಿ ಎಂಬುವವನ ಮೇಲೆ ೨೦ಕ್ಕೂ ಹೆಚ್ಚು ಜಾನುವಾರು ಕಳವು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಕೇವಲ 5 ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಈತ ಐದೇ ದಿನದಲ್ಲಿ ಜಾಮೀನು ಪಡೆದು ಹೊರಬಂದಿದ್ದಾನೆ. ಕಾನೂನಿನಲ್ಲಿರುವ ದೌರ್ಬಲ್ಯಗಳನ್ನೇ ದುರ್ಬಳಕೆ ಮಾಡಿಕೊಳ್ಳುವ ಇವರು ಜಾಮೀನು ಪಡೆದು ಹೊರಬಂದು ಮತ್ತದೇ ಚಾಳಿ ಮುಂದುವರಿಸುತ್ತಿದ್ದಾರೆ.* ಹೇಳಿಕೆ:
ಈ ಹಿಂದೆ ಕೆ.ಆರ್.ಪೇಟೆ ತಾಲೂಕಿನ ಚೋಳಸಮುದ್ರ ಗ್ರಾಮದಲ್ಲಿ ರೈತರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಐದೇ ದಿನಕ್ಕೆ ಜಾಮೀನು ಪಡೆದು ಹೊರಗೆ ಬಂದ ಆರೋಪಿಗಳು ಪುನಃ ಕಳ್ಳತನ ಪ್ರಾರಂಭಿಸಿದ್ದಾರೆ.-ಹರೀಶ್, ಮೂಡಲಮಾಯಗೋಡನಹಳ್ಳಿ ನಿವಾಸಿ