(ಮಿಡಲ್‌) ತೊಗರಿ ಬೆಳೆ ಹಾನಿ: ಎಕರೆಗೆ ₹25 ಸಾವಿರ ಪರಿಹಾರಕ್ಕೆ ಆಗ್ರಹ

| Published : Nov 29 2024, 01:04 AM IST

ಸಾರಾಂಶ

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ । ಡಿಸಿ ಮುಖಾಂತರ ಸಿಎಂಗೆ ಮನವಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ನೆಟೆ ರೋಗದಿಂದ ಹಾನಿಯಾದ ತೊಗರಿ ಬೆಳೆ ಸಮೀಕ್ಷೆ ಮಾಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಒಣಗಿದ ತೊಗರಿ ಬೆಳೆ ಹಿಡಿದು ಪ್ರತಿಭಟಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಮುಖಂಡರಾದ ದಿಲೀಪ ನಾಗೂರೆ, ರಾಯಪ್ಪ ಹುರುಮುಂಜಿ, ಗುರು ಹಾವುನೂರು, ಪ್ರಕಾಶ ಜಾನೆ, ರೇವಣಸಿದ್ದಪ್ಪ ಪಾಟೀಲ, ಸಿದ್ದಣ್ಣ ದಣ್ಣೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ಸಿಎಂಗೆ ಹಾಗೂ ಜಂಟಿ ಕೃಷಿ ನಿರ್ದೇಶಕರ ಮುಖಾಂತರ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ 6.06884 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾದ ತೊಗರಿಯಲ್ಲಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿದೆ. ನೆಟೆ ರೋಗದಿಂದ ಒಣಗಿದ ತೊಗರಿ ಬೆಳೆ ಸಮೀಕ್ಷೆ ಮಾಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು, ಒಣಗಿ ಹೋದ ತೊಗರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು, ಸರ್ಕಾರ ಬೆಳೆ ಹಾನಿಯ ವರದಿ ತರಸಿಕೊಂಡು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ 30 ಕೋಟಿ ರು. ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು, ಪ್ರತಿ ಕ್ವಿಂಟಲ್ ತೊಗರಿಗೆ ₹12 ಸಾವಿರ ಬೆಂಬಲ ಬೆಲೆ ನೀಡಬೇಕು, ತೊಗರಿ ಮಂಡಳಿ ಬಲವರ್ಧನೆಗೆ ₹25 ಕೋಟಿ ಅನುದಾನ ನೀಡಬೇಕು, ಕೇಂದ್ರ ಸರ್ಕಾರ ಹೊರ ದೇಶದಿಂದ ಆಮದು ಮಾಡಿಕೊಳ್ಳುವ ತೊಗರಿ ಮೇಲೆ ಶೇ.50 ರಷ್ಟು ತೆರಿಗೆ ಹಾಕಬೇಕು ಎಂಬ ಇತ್ಯಾದಿ ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.