ಹಿಂದುಸ್ತಾನಿಯಲ್ಲಿ ಯಮನ್ ಎಂದು ಕರೆಯುವ ಕರ್ನಾಟಕ ಸಂಗೀತದಲ್ಲಿ ಯಮನ್ ಕಲ್ಯಾಣಿ ರಾಗದಲ್ಲಿ ಎರಡು ಪ್ರಸ್ತುತಿ ಅಮೋಘವಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರುಕೇವಲ ಒಂದು ವರ್ಷದ ಹಿಂದೆ ಸಿತಾರ್ ತರಗತಿ ಆರಂಭಿಸಿ 45ಕ್ಕೂ ಹೆಚ್ಚು ಸಿತಾರ್ ವಾದಕರನ್ನು ತಯಾರುಗೊಳಿಸಿ, ಅಭೂತ ಪೂರ್ವವಾದ ಸಂಗೀತವನ್ನು ನಗರದ ಕಲಾಮಂದಿರದಲ್ಲಿ ಪ್ರಸ್ತುತಪಡಿಸಲಾಯಿತು.ಕಲಾ ಸಂವಾಹನ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಸ್ತಾದ್ ಮೊಹಸಿನ್ ಖಾನ್ ಅವರು ತಯಾರು ಮಾಡಿದ ಶಿಷ್ಯಂದಿರು ಒಂದು ವೇದಿಕೆಯಲ್ಲಿ ಏಕಕಾಲಕ್ಕೆ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದರು.ಹಿಂದುಸ್ತಾನಿಯಲ್ಲಿ ಯಮನ್ ಎಂದು ಕರೆಯುವ ಕರ್ನಾಟಕ ಸಂಗೀತದಲ್ಲಿ ಯಮನ್ ಕಲ್ಯಾಣಿ ರಾಗದಲ್ಲಿ ಎರಡು ಪ್ರಸ್ತುತಿ ಅಮೋಘವಾಗಿತ್ತು. ಎರಡನೇ ಕೃತಿಯ ಅಂತ್ಯದಲ್ಲಿ ಮೂಡಿಬಂದ ಸಿತಾರ್ ಮತ್ತು ತಬಲ ವಾದನದ ಝುಗಲ್ ಬಂಧಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.ಸಾಮಾನ್ಯವಾಗಿ ಯಮನ್ ರಾಗವನ್ನು ಸಂಜೆಯ ವೇಳೆಯೇ ನುಡಿಸುವುದರಿಂದ ಶನಿವಾರದ ಇಳಿಸಂಜೆಯ ತಂಪಿಗೆ ಯಮನ್ ಕಲ್ಯಾಣಿ ರಾಗವು ಇಂಪು ಬೆರೆಸಿತು. ಕಿಕ್ಕಿರಿದು ತುಂಬಿದ್ದ ಕಲಾಮಂದಿರದಲ್ಲಿ ಕಲಾಸಕ್ತರು, ಸಂಗೀತ ಪ್ರೇಮಿಗಳು ಚಪ್ಪಾಳೆಯ ಸುರಿಮಳೆಗೈದರು. ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಸಿತಾರ್ ಪ್ರಸ್ತುತಿಗಳಲ್ಲಿ ಈ ಕಾರ್ಯಕ್ರಮ ಮೇಲುಗೈ ಸಾಧಿಸಿತು.ಇಬ್ಬರು ತಬಲ ವಾದಕರು, ಇಬ್ಬರು ರಿದಂ ಪ್ಯಾಡ್, ಒಬ್ಬರು ಶಹನಾಯ್, ಒಬ್ಬರು ಹಾರ್ಮೋನಿಯಂ, ಒಬ್ಬರು ವಯೋಲಿನ್ ವಾದನವು ಸಿತಾರ್ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಎರಡು ರಾಗಗಳ ಪ್ರಸ್ತುತಿಯ ಬಳಿಕ ಸೋಜುಗಾದ ಸೂಜಿ ಮಲ್ಲಿಗೆ ಗೀತೆಯ ಒಂದೆರಡು ಚರಣಗಳನ್ನು ಸಿತಾರ್‌ಮೂಲಕ ನುಡಿಸಲಾಯಿತು.ಬಳಿಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸುಗಮ ಸಂಗೀತ ಗಾಯಕಿ ಎಚ್.ಆರ್. ಲೀಲಾವತಿ ಅವರು, ಈ ಕಾರ್ಯಕ್ರಮದ ಮೂಲಕ ನನಗೆ ಅತೀವ ಆಶ್ಚರ್ಯವಾಗುತ್ತಿದೆ. ತರಗತಿ ಆರಂಭವಾಗಿ ಒಂದೇ ವರ್ಷದಲ್ಲಿ ದೊಡ್ಡ ವೇದಿಕೆಯ ಮೇಲೆ ನುಡಿಸುವ ಮಟ್ಟಿಗೆ ಮೊಹಸಿನ್ ಖಾನ್ ಅವರು ತಮ್ಮ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಇದೊಂದು ಚೆಂದದ ಪ್ರಸ್ತುತಿ ಎಂದು ಬಣ್ಣಿಸಿದರು.ಮೊಹಸಿನ್ ಅವರ ಚೈತನ್ಯ ಅಪಾರ. ನಮ್ಮ ಮೈಸೂರು ಇಂದು ಸಂಭ್ರಮದ ದಿನವನ್ನು ಆಚರಿಸುತ್ತಿದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಷಯ. ಇದೊಂದು ರೀತಿಯಲ್ಲಿ ಮೈಸೂರು ಮತ್ತು ಧಾರವಾಡದ ಪ್ರೇಮ ಸಮ್ಮಿಲನವಾಗಿದೆ ಎಂದರು.ಕೇವಲ ಒಂದೇ ವರ್ಷದಲ್ಲಿ ಇಂತಹ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅವರಿಗೆ ಸಿತಾರ್ ವಾದನದ ಮೇಲೆ ಇರುವ ಪ್ರೀತಿ, ಬದ್ಧತೆ ಅಂತದ್ದು. ಇದು ಸಾಧ್ಯವೇ ಎಂಬ ಮಟ್ಟಿಗೆ ನಾನು ಆಶ್ಚರ್ಯಚಕಿತಳಾಗಿದ್ದೇನೆ. ಮೈಸೂರಿನ ಜನತೆಗೆ ಇಂತ ಶಾಲೆ ಬೇಕಿತ್ತು. ಆ ಕಲೆಯನ್ನು ಮೊಹಸಿನ್ ಖಾನ್ ಮೈಸೂರಿನ ಅಂಗಳಕ್ಕು ತಂದು ಕೊಟ್ಟಿದ್ದಾರೆ. ಅವರ ಶಿಷ್ಯ ಪರಂಪರೆ ಹೀಗೆಯೇ ಬೆಳೆಯಲಿ. ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರು ಅತ್ಯಂತ ಸರಳರು ಮತ್ತು ಸಂಗೀತದ ಶಿಖರ ಅವರು ಆಗಮಿಸಿರುವುದು ನನಗಂತೆ ಹೆಮ್ಮೆಯ ವಿಷಯ ಎಂದು ಹೇಳಿದರು.ಬಳಿಕ ಮಾತನಾಡಿದ ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್‌ಕುಮಾರ್, ಕರ್ನಾಟಕ ಸಂಗೀತಕ್ಕೆ ಮೈಸೂರು ಹೆಸರುವಾಸಿಯಾದರೆ, ಧಾರವಾಡ ಹಿಂದೂಸ್ತಾನಿ ಸಂಗಿತಕ್ಕೆ ಹೆಸರುವಾಸಿ. ಎರಡೂ ಕೂಡ ಸಂಗೀತದ ಎರಡು ಕಣ್ಣುಗಳಂತೆ. ಒಂದು ವರ್ಷದಲ್ಲಿ ಕಲಿತು ಲಯ, ತಾಳ ತಪ್ಪದೆ ನುಡಿಸಿದ್ದಾರೆ ಎಂದು ವಾದಕರನ್ನು ಶ್ಲಾಘಿಸಿದರು.ನಾನು 32 ವರ್ಷ ಸಂಗೀತ ಕಲಿಸಿ ನಿವೃತ್ತನಾದೆ. ಮೈಸೂರು ಎಂದರೆ ವೀಣೆಗೆ ಹೆಸರುವಾಸಿ. ಈಗ ಸಿತಾರ್ ಗೂ ಹೆಸರಾಗಲಿ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಲಿಯಲು ಯುವಕರೆ ಬರುತ್ತಿದ್ದಾರೆ ಎಂಬುದು ಸಂತೋಷದ ಸಂಗತಿ. ಮಕ್ಕಳ ಕಲಿಕೆಗೆ ಪೋಷಕರ ಬೆಂಬಲ, ಆಶೀರ್ವಾದ ಕೂಡ ಬೇಕು. ಅಂತೆಯೇ ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಶ್ರೋತೃಗಳು ಮುಖ್ಯ ಎಂದರು.ಬಳಿಕ ಪಂ. ವೆಂಕಟೇಶ್‌ಕುಮಾರ್ ಅವರ ಗಾಯನ ಕಾರ್ಯಕ್ರಮ ನೆರವೇರಿತು.ವೇದಿಕೆಯಲ್ಲಿ ಚಿನ್ಮಯ ಮಿಷನ್ ನ ಸ್ವಾಮಿ ಕೃತಾತ್ಮನಂದಜಿ, ಉಸ್ತಾದ್ ಮೊಹಸಿನ್ ಖಾನ್, ಕಲಾ ಸಂಹವನ ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ ವಸ್ತ್ರದ ಇದ್ದರು. ವೇದಿಕೆ ಎದುರು ಉದ್ಯಮಿ ಎ.ಪಿ. ನಾಗೇಶ್, ನಾಗರಾಜ್ ವಿ. ಭೈರಿ, ಎಚ್.ವಿ. ರಾಜೀವ್, ಕವಿ ಕೆ.ಸಿ. ಶಿವಪ್ಪ, ಪ್ರೊ.ಕೆ.ಎಸ್. ಭಗವಾನ್ ಮೊದಲಾದವರು ಇದ್ದರು.
eom/mys/dnm/