ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಗ್ರಾಮೀಣ ಬಡ ಮಹಿಳೆಯರ ಸ್ವಯಂ ಉದ್ಯೋಗ ಉತ್ತೇಜಿಸುವ ಮೂಲಕ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಹುಕ್ಕೇರಿಯಲ್ಲಿ ರೂಪಿಸಿದ ಬಹುನಿರೀಕ್ಷಿತ ಯೋಜನೆಯೊಂದು ಆರಂಭದಲ್ಲೇ ಮುಗ್ಗರಿಸಿದಂತಾಗಿದೆ.
ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಬಳಿ ಆರಂಭಿಸಿದ ಸಂಜೀವಿನಿ ಮಾರಾಟ ಮಳಿಗೆ ಉದ್ಘಾಟನೆಗೆ ಮಾತ್ರ ಸೀಮಿತವಾದಂತಾಗಿದೆ. ಈ ಮೂಲಕ ಸರ್ಕಾರದ ಮಹಾತ್ವಾಕಾಂಕ್ಷಿ ಮಹಿಳೆಯರ ಸ್ವಾವಲಂಬನೆಗೊಳಿಸುವ ನಿರೀಕ್ಷೆ ಹುಸಿಯಾಗಿದೆ.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿ ಇಲ್ಲಿನ ಹುಕ್ಕೇರಿ - ಚಿಕ್ಕೋಡಿ ರಸ್ತೆಯ ತಾಲೂಕು ಪಂಚಾಯಿತಿ ಬಳಿ ಸುಮಾರು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಸಂಜೀವಿನಿ ಮಾರಾಟ ಮಳಿಗೆಗೆ ಶೆಡ್ ನಿರ್ಮಿಸಲಾಗಿದೆ. ಕಳೆದ ವರ್ಷದ ನ.7 ರಂದು ಉದ್ಘಾಟನೆಗೊಂಡ ಈ ಮಾರಾಟ ಮಳಿಗೆಯ ಬಾಗಿಲು ತೆರೆದಿದ್ದೇ ಅಪರೂಪ.
ಸರ್ಕಾರ ಮಹಿಳಾ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹಿಳೆಯರಿಂದ ಉತ್ಪಾದಿಸಿದ ಉತ್ತಮ ಗುಣಮಟ್ಟದ ವಸ್ತುಗಳು ಒಂದೇ ಸೂರಿನಡಿ ಸಿಗುವ ಸದುದ್ದೇಶ ಹೊಂದಿ ಈ ಮಹತ್ತರ ಯೋಜನೆ ರೂಪಿಸಿದೆ. ಆದರೆ, ಮಳಿಗೆ ಆರಂಭಕ್ಕೆ ಮೀನಮೇಷ ಎನಿಸಿದ್ದಲ್ಲದೇ ಸೂಕ್ತ ಮಾರುಕಟ್ಟೆ ಕಲ್ಪಿಸುವಲ್ಲಿ ತಾಪಂ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂಬ ದೂರುಗಳಿವೆ.ಎನ್‌ಆರ್‌ಎಲ್‌ಎಂ ಅಡಿ ತಾಲೂಕಿನ 52 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರ ನೊಂದಾಯಿತ ಮಹಿಳಾ ಸ್ವ-ಸಹಾಯ ಗುಂಪುಗಳಿವೆ. ಈ ಪೈಕಿ 25ಕ್ಕೂ ಹೆಚ್ಚು ಗುಂಪಿನ ಸದಸ್ಯರು ತಯಾರಿಸಿದ ವಿವಿಧ ಆಹಾರಗಳು, ಗೃಹಾಲಂಕಾರ, ಕರಕುಶಲ, ಗೃಹೋಪಯೋಗಿ ವಸ್ತುಗಳನ್ನು ಮಳಿಗೆಗೆ ಪೂರೈಸುತ್ತಿವೆ. ಆದರೆ, ಸಿದ್ಧಪಡಿಸಿ ಪೂರೈಸಿದ ಉತ್ಪನ್ನಗಳು ಮಾರಾಟವಾಗದೇ ಇರುವುದರಿಂದ ಮಹಿಳೆಯರು ನಿರಾಶೆಗೊಂಡಿದ್ದಾರೆ.
ಈ ಮಳಿಗೆ ಆರಂಭವಾಗಿ 3 ತಿಂಗಳು ಸಮೀಪಿಸಿದರೂ ಸಂಬಂಧಿಸಿದವರು ಮುಚ್ಚಿದ ಕದ ತೆರೆಯುವ ಗೋಜಿಗೆ ಹೋಗಿಲ್ಲ. ತಾಪಂ ಅಧಿಕಾರಿಗಳು ನಿತ್ಯ ಈ ಮಳಿಗೆಯ ಬಳಿಯೇ ಹಾಯ್ದು ಹೋಗುತ್ತಿದ್ದರೂ ಮುಚ್ಚಿದ ಕದ ಇವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸ. ಇದೇ ವೇಳೆ ತಾವು ಪೂರೈಸಿದ ಉತ್ಪನ್ನಗಳು ಅವಧಿ ಮೀರಿ ನಾಶವಾಗುವ ಹಂತದಲ್ಲಿವೆ ಎಂದು ಮಹಿಳಾ ಉತ್ಪನ್ನ ಸಂಘಗಳ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.ಬಡತನ ನಿರ್ಮೂಲನೆ ಮತ್ತು ಸ್ವಯಂ ಉದ್ಯೋಗಕ್ಕೆ ಸಮರ್ಥರನ್ನಾಗಿ ಮಾಡುವುದೇ ಎನ್‌ಆರ್‌ಎಲ್‌ಎಂ ಉದ್ದೇಶವಾಗಿದ್ದು ಸರ್ಕಾರ ಸ್ವಯಂ ಉದ್ಯೋಗ ಉತ್ತೇಜಿಸಲು ಮತ್ತು ಗ್ರಾಮೀಣ ಬಡವರ ಸಂಘಟನೆಯ ಮೇಲೆ ಕೇಂದ್ರೀಕರಿಸಿದೆ. ಆದರೆ, ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಎನ್‌ಆರ್‌ಎಲ್‌ಎಂ ವಿಭಾಗದವರು ತೋರಿಕೆಗೆ ಅಥವಾ ಕಾಟಾಚಾರಕ್ಕೆ ಮಳಿಗೆ ನಿರ್ಮಿಸಿದರೇ ಎನ್ನುವ ಪ್ರಶ್ನೆ ಎದುರಾಗಿದೆ.
ಇನ್ನು ಮಹಿಳಾ ಸಬಲೀಕರಣದ ಮಹತ್ವದ ಈ ಮಳಿಗೆ ಉದ್ಘಾಟನೆಗೆ ಯಾವುದೇ ಜನಪ್ರತಿನಿಧಿಗಳನ್ನು ಆಹ್ವಾನಿಸದಿರುವುದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಉದ್ಘಾಟನೆ ವೇಳೆ ತರಾತುರಿ ಅನುಸರಿಸಿದ ತಾಪಂ ಅಧಿಕಾರಿಗಳ ನಡೆ ಚುನಾಯಿತ ಪ್ರತಿನಿಧಿಗಳ ಕಂಗೆಣ್ಣಿಗೆ ಗುರಿಯಾಗಿದ್ದಲ್ಲದೇ ತೀವೃ ಗರಂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.ಕೋಟ್....ಹೊಸದಾಗಿ ಬೆಳಗಾವಿ ಜಿಪಂಗೆ ನಿಯುಕ್ತಿಗೊಂಡಿದ್ದು ಅಧಿಕಾರ ವಹಿಸಿಕೊಂಡ ಬಳಿಕ ಹುಕ್ಕೇರಿಗೆ ಭೇಟಿ ನೀಡಿ ಪರಿಶೀಲಿಸುವೆ. ಮಹಿಳಾ ಉತ್ಪನ್ನ ಮಳಿಗೆ ಆರಂಭಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
-ರಾಹುಲ್ ಶಿಂಧೆ, ನೂತನ ಜಿಪಂ ಸಿಇಒ.