ಮಕ್ಕಳ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತೀಯ ಮಕ್ಕಳ ಚಿಕಿತ್ಸಾ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ. ನೀಲಂ ಮೋಹನ್‌ ಅವರಿಗೆ ಈ ಸಾಲಿನ ವೈದ್ಯಕೀಯ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಧಾರವಾಡ:

ಭಾರತೀಯ ಮಕ್ಕಳ ಚಿಕಿತ್ಸಾ ಅಕಾಡೆಮಿಯ ಜಿಲ್ಲಾ ಶಾಖೆಯು ವತಿಯಿಂದ ವೈದ್ಯಕೀಯ ಭೂಷಣ್ ಪ್ರಶಸ್ತಿ ಪ್ರದಾನ ಮತ್ತು ಮಕ್ಕಳ ಚಿಕಿತ್ಸಾ ವಿಧಾನಗಳ ಹೊಸ ಆಯಾಮಗಳ ಸಂವಾದ ಕಾರ್ಯಕ್ರಮ ಜು. 19ರಂದು ಸಂಜೆ 5ಕ್ಕೆ ಹುಬ್ಬಳ್ಳಿಯ ಹೋಟೆಲ್ ಡೆನಿಸನ್ಸ್‌ನಲ್ಲಿ ನಡೆಯಲಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತೀಯ ಮಕ್ಕಳ ಚಿಕಿತ್ಸಾ ಅಕಾಡೆಮಿ ಜಿಲ್ಲಾಧ್ಯಕ್ಷ ಡಾ. ಕವನ ದೇಶಪಾಂಡೆ, ಮಕ್ಕಳ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತೀಯ ಮಕ್ಕಳ ಚಿಕಿತ್ಸಾ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ. ನೀಲಂ ಮೋಹನ್‌ ಅವರಿಗೆ ಈ ಸಾಲಿನ ವೈದ್ಯಕೀಯ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಕ್ಕಳ ಆರೋಗ್ಯ, ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಮಕ್ಕಳ ವೈದ್ಯಕೀಯ ಶಿಕ್ಷಣಕ್ಕೆ ಅವರ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಈ ವೇಳೆ ಭಾರತದ ವಿಶಿಷ್ಟ ವೈದ್ಯಕೀಯ ವೃತ್ತಿಪರರು ಮತ್ತು ಸೇನಾ ಅಧಿಕಾರಿಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಜನರಲ್ ಡಾ. ಮಾಧುರಿ ಕಾನಿಟ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಹ ಪ್ರದಾನ ಮಾಡಲಾಗುತ್ತಿದೆ. ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಪ್ರತಿಷ್ಠಿತ ಮೂರು ನಕ್ಷತ್ರಗಳ ಶ್ರೇಣಿಯನ್ನು ಪಡೆದ ಮೂರನೇ ಮಹಿಳೆ ಇವರು. ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ (ಎಎಫ್‌ಎಂಸಿ) ಡೀನ್ ಆಗಿ, ಸಮಗ್ರ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಮತ್ತು ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಇವರು ಗೌರವ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಭಾರತೀಯ ಮಕ್ಕಳ ಚಿಕಿತ್ಸಾ ಅಕಾಡೆಮಿ ರಾಜ್ಯಾಧ್ಯಕ್ಷ ಡಾ. ರವಿಶಂಕರ ಮಾರ್ಪಳ್ಳಿ ಸೇರಿ ರಾಜ್ಯದ ಪ್ರಖ್ಯಾತ ಮಕ್ಕಳ ವೈದ್ಯರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ರಕ್ಷಣಾ ನಾಯಕರ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಡಾ. ಕವನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಗೌರವ ಕಾರ್ಯದರ್ಶಿ ಡಾ. ಮಹೇಶ ಮರಳಿಹಳ್ಳಿ, ಡಾ. ಶ್ರುತಿ ಪಾಂಡುರಂಗಿ, ಡಾ. ಉದಯ ರಾಯಕರ ಇದ್ದರು.