ಧಾರವಾಡ:

ವಿದ್ಯಾರ್ಥಿಗಳ ಬದುಕಿನಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸಕಾಲಿಕ ನಿರ್ಧಾರಗಳು ಮಹತ್ವದ ಪಾತ್ರ ವಹಿಸುತ್ತವೆ. ಇವುಗಳೇ ಯಶಸ್ವಿ ಬದುಕಿನ ದಾರಿದೀಪಗಳಾಗಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಅಭಿರುಚಿ ಹಾಗೂ ಗುರಿಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಅಪರ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ, ಡಯಟ್ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಿದ್ಧಪಡಿಸಲಾದ ‘ವೃತ್ತಿ ಮಾರ್ಗದರ್ಶನ ಕೈಪಿಡಿ’ ಬಿಡುಗಡೆಗೊಳಿಸಿದ ಅವರು, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವೃತ್ತಿ ಆಯ್ಕೆಗೆ ಸಂಬಂಧಿಸಿದಂತೆ ಹಲವು ಗೊಂದಲ ಎದುರಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಕೆಲವೇ ವೃತ್ತಿಗಳತ್ತ ಹೆಚ್ಚಿನ ಒಲವು ಕಂಡುಬರುತ್ತಿದೆ. ಆದರೆ, ಇಂದಿನ ದಿನಗಳಲ್ಲಿ ವಿಜ್ಞಾನ, ವಾಣಿಜ್ಯ, ಕಲೆ, ಕೃಷಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಕೈಪಿಡಿಯನ್ನು ಅಭಿರುಚಿ, ಸಾಮರ್ಥ್ಯ, ಅವಕಾಶ ಮತ್ತು ಯಶಸ್ಸು ಎಂಬ ನಾಲ್ಕು ಪ್ರಮುಖ ಅಂಶಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಗುರುತಿಸಿಕೊಳ್ಳುವುದು, ತಮ್ಮ ಸಾಮರ್ಥ್ಯವನ್ನು ಅಳೆಯುವುದು, ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುವುದು ಹಾಗೂ ಗುರಿ ಸಾಧನೆಗೆ ಯೋಜನೆ ರೂಪಿಸಿಕೊಳ್ಳಲು ಕೈಪಿಡಿ ಸಹಕಾರಿಯಾಗಲಿ ಎಂದು ಹೇಳಿದರು.

ಮಕ್ಕಳ ಮೇಲೆ ತಮ್ಮ ನಿರೀಕ್ಷೆಗಳನ್ನು ಹೇರದೆ, ಅವರ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಸರಿಯಾದ ಸಮಯದಲ್ಲಿ ದೊರೆಯುವ ಮಾರ್ಗದರ್ಶನವು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.


ಸ್ಪಷ್ಟವಾದ ಕನಸುಗಳಿಗೆ ಸರಿಯಾದ ದಾರಿ ಮತ್ತು `ಸೂಕ್ತ ಮಾರ್ಗದರ್ಶನವಿದ್ದಾಗ ಮಾತ್ರ ಯಶಸ್ಸು ಸಾಧ್ಯ’ ಎಂಬ ಆಶಯದೊಂದಿಗೆ ಸಿದ್ಧಪಡಿಸಿರುವ ಈ ವೃತ್ತಿ ಮಾರ್ಗದರ್ಶನ ಕೈಪಿಡಿಯು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವಿವಿಧ ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ದಿಕ್ಸೂಚಿಯಾಗಲಿದೆ ಎಂದು ಆಶಿಸಿದರು.

ಅಪರ ಆಯುಕ್ತರ ಕಚೇರಿಯ ಉಪನಿರ್ದೇಶಕ ಗಿರೀಶ್ ಪದಕಿ, ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ ಇದ್ದರು.