ಕನ್ನಡಪ್ರಭ ವಾರ್ತೆ ಬೆಂಗಳೂರು:
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೂ ನಿರಂತರ ಮಳೆ ಸುರಿದಿದೆ. ಕುಮಟಾದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕೊಠಡಿಯೊಂದಕ್ಕೆ ಎರಡು ದೊಡ್ಡ ಬಂಡೆಗಳು ಬಂದು ಬಡಿದಿದ್ದು, ತರಗತಿಯ ಹೊರಮಾಡಿನ ಕಂಬ, ನೆಲ ಹಾಗೂ ಚಾವಣಿಗೆ ಹಾನಿಯುಂಟಾಗಿದೆ. ಧರೆಯ ಬಂಡೆಗಳು ಬೀಳುವ ಮುನ್ಸೂಚನೆ ಇದ್ದುದ್ದರಿಂದ ಅಲ್ಲಿನ ತರಗತಿಗಳಿಂದ ಮೊದಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಇದೇ ವೇಳೆ, ಮಳೆಯಿಂದಾಗಿ ಅಂಕೋಲಾದ ಚತುಷ್ಪಥ ರಸ್ತೆ, ಗೋಕರ್ಣ-ತದಡಿ ರಸ್ತೆಗಳಲ್ಲಿ ಗುಡ್ಡ ಕುಸಿದು ಜನಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಭಾರೀ ಮಳೆ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು.
ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಅಂಕೋಲಾ ತಾಲೂಕಿನ ಬೇಲೇಕೇರಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮೂರು ಮೀನುಗಾರಿಕಾ ದೋಣಿಗಳು ನೀರಿನಲ್ಲಿ ಮುಳುಗಡೆಯಾಗಿವೆ. ಭೀಕರ ಅಲೆಗಳ ಹೊಡೆತದಿಂದ ಬಂದರಿನಲ್ಲಿ ನಿಲ್ಲಿಸಲಾಗಿದ್ದ ದೋಣಿಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಡಿಕ್ಕಿ ಹೊಡೆದು ನೀರಿನೊಳಗೆ ಮುಳುಗಿವೆ ಎನ್ನಲಾಗಿದೆ. ಈ ಮಧ್ಯೆ, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಶುಕ್ರವಾರ ನೀರಿನಲ್ಲಿ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಿಸಿದ್ದಾರೆ.ಗೋಕರ್ಣದ ಮಹಾಬಲೇಶ್ವರ ಮಂದಿರದ ಗರ್ಭಗುಡಿಯಿಂದ ತೀರ್ಥ ಸೋಮಸೂತ್ರದ ಮೂಲಕ ಹೊರ ಹೋಗದ ಪರಿಣಾಮ, ಆತ್ಮಲಿಂಗ ಜಲಾವೃತಗೊಂಡಿತ್ತು. ಹೀಗಾಗಿ, ಮುಂಜಾನೆಯಿಂದ ಮಧ್ಯಾಹ್ನದವರೆಗೂ ಭಕ್ತರಿಗೆ ಹೊರಗಡೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ಮಂಗಳೂರು ನಗರದ ಹಲವೆಡೆ ರಸ್ತೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ (ಪಿಯುಸಿವರೆಗೆ) ಶನಿವಾರ ರಜೆ ಘೋಷಿಸಲಾಗಿದೆ. ಬೆಂಗಳೂರು, ಮೈಸೂರು ಸೇರಿ ಇನ್ನೂ ಕೆಲ ಜಿಲ್ಲೆಗಳಲ್ಲೂ ಮಳೆ ಆದ ಬಗ್ಗೆ ವರದಿ ಆಗಿದೆ.