ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಾರ್ವಜನಿಕರೊಂದಿಗೆ ಯಾಕ್ರೀ ಕೂಗಾಡುತ್ತೀರಾ? ನಿಧಾನವಾಗಿ ಮಾತನಾಡಿ ಎಂದು ಶಾಸಕ ಸಿಮೆಂಟ್ ಮಂಜು ಸೂಚಿಸಿದರೆ, ನಾನೆಲ್ಲಿ ಕೂಗಾಡುತ್ತಿದ್ದೇನೆ. ನೀವೇ ಕೂಗಾಡುತ್ತಿರುವುದು ಎಂದು ತಹಸೀಲ್ದಾರ್ ಸುಪ್ರೀಯಾ ಹೇಳಿದ್ದರಿಂದ ಕೆಲಕಾಲ ತಹಸೀಲ್ದಾರ್ ಕಚೇರಿ ಸಭಾಂಗಣ ಸ್ತಬ್ಧಗೊಂಡಿತ್ತು.ಅಷ್ಟಕ್ಕೂ ನಡೆದಿದ್ದೇನು?:
ಬುಧವಾರ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ರಮಣ ಮಹರ್ಷಿ ಜಯಂತಿ ಪೂರ್ವಭಾವಿ ಸಭೆಗೆ ಆಗಮಿಸಿದ ಶಾಸಕರನ್ನು ಕಂಡ ಸಾರ್ವಜನಿಕರು ಸಭೆ ಆಯೋಜನೆಯಾಗಿದ್ದ ಸಭಾಂಗಣ ಪ್ರವೇಶಿಸಿದರು. ಇದರಿಂದ ಸಿಡಿಮಿಡಿಗೊಂಡ ತಹಸೀಲ್ದಾರ್ ಏರುಧ್ವನಿಯಲ್ಲಿ ಕೊಠಡಿಯಿಂದ ಹೊರಗಿರುವಂತೆ ಸಾರ್ವಜನಿಕರಿಗೆ ಸೂಚಿಸಿದರು. ತಹಸೀಲ್ದಾರ್ ವರ್ತನೆಯಿಂದ ಕಸಿವಿಸಿಗೊಂಡ ಶಾಸಕರು, ಯಾಕ್ರೀ ಸಾರ್ವಜನಿಕರೊಂದಿಗೆ ಕೂಗಾಡುತ್ತೀರಾ, ಮೆದುವಾಗಿ ಮಾತನಾಡಿ, ನಾವಿರುವುದೇ ಸಾರ್ವಜನಿಕರ ಕೆಲಸ ಮಾಡಲು, ಅವರು ಕಟ್ಟುವ ತೆರಿಗೆಯಿಂದ ನಾವು ನೀವು ಸಂಬಳ ತೆಗೆದುಕೊಳ್ಳುತ್ತಿರುವುದು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.ಇದರಿಂದ ಕೋಪಗೊಂಡ ತಹಸೀಲ್ದಾರ್ ನಾನಲ್ಲ ಕೂಗಾಡುತ್ತಿರುವುದು ನೀವು ಎಂದು ಏರುಧ್ವನಿಯಲ್ಲಿ ಶಾಸಕರಿಗೆ ಹೇಳಿದ್ದರಿಂದ ಕೆಲಕಾಲ ಸಭೆ ಸ್ತಬ್ಧಗೊಂಡಿತ್ತು. ಮಾತು ಮುಂದುವರಿಸಿದ ತಹಸೀಲ್ದಾರ್ ಸಭೆ ನಡೆಸುವುದಾ ಅಥವಾ ಸಾರ್ವಜನಿಕ ಕೆಲಸ ಮಾಡುವುದಾ ಎಂದು ಕೇಳಿದರು. ಮೊದಲು ಸಾರ್ವಜನಿಕರ ಕೆಲಸ ಮಾಡಿ ನಂತರ ಸಭೆ ನಡೆಸೋಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದರಿಂದ ಮತ್ತಷ್ಟು ಕೋಪಗೊಂಡ ತಹಸೀಲ್ದಾರ್ ಸುಪ್ರೀಯಾ ಸಾರ್ವಜನಿಕರು ನೀಡಿದ ಕಡತವನ್ನು ಪಡೆದು ಸಭೆಯಿಂದ ತಮ್ಮ ಕೊಠಡಿಗೆ ತೆರಳಿದರು.
ಸಭೆಗೆ ತಹಸೀಲ್ದಾರ್ ಆಗಮಿಸುವ ನಿರೀಕ್ಷೆಯಲ್ಲಿ ಕೆಲಕಾಲ ಕಾದರೂ ವಾಪಸ್ಸಾಗದ ಹಿನ್ನೆಲೆ ಸಹಾಯಕ ತಹಸೀಲ್ದಾರ್ ಮೋಹನ್ ಕುಮಾರ್ ಉಪಸ್ಥತಿಯಲ್ಲಿ ಸಭೆ ಆರಂಭಿಸಲಾಯಿತು. ಆದರೆ, ಸಭೆ ಮುಕ್ತಾಯಗೊಂಡರೂ ಸಹ ತಹಸೀಲ್ದಾರ್ ಸಭೆಗೆ ಆಗಮಿಸಲಿಲ್ಲ.ತಹಸೀಲ್ದಾರ್ ವಿರುದ್ಧ ದೂರುಗಳ ಸುರಿಮಳೆ:
ಈ ವೇಳೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ ಸಾರ್ವಜನಿಕರು, ತಿಂಗಳಾನುಗಟ್ಟಲೆ ಅಲೆದರೂ ಕಚೇರಿಯಲ್ಲಿ ಕೆಲಸವಾಗುವುದಿಲ್ಲ, ದೂರದೂರದ ಊರಿನಿಂದ ಬರುವ ನಮಗೆ ಕೆಲಸವಾಗದಿದ್ದರೂ ಸಾವಿರಾರು ರು.ಗಳು ಖರ್ಚಾಗುತ್ತಿವೆ. ಕೆಲಸಕ್ಕಾಗಿ ಪ್ರತಿದಿನ ಬಂದರೆ ಪದೇ ಪದೇ ಬರಬೇಡಿ ಎಂದು ತಹಸೀಲ್ದಾರ್ ಹೇಳುತ್ತಾರೆ ಎಂದು ಯಸಳೂರು ಹೋಬಳಿ ಸುಂಡಹಳ್ಳಿ ನಿವಾಸಿ ಮೋಹನ್ ಎಂಬುವವರು ದೂರಿದರು.ಕಳೆದ ಎರಡೂವರೆ ವರ್ಷದಿಂದ ಕಚೇರಿ ಕೆಲಸಕ್ಕಾಗಿ ಆಗಮಿಸುತ್ತಿದ್ದೇವೆ. ಆದರೆ, ಯಾವುದೇ ಕೆಲಸವಾಗಿಲ್ಲ. ಮಧ್ಯವರ್ತಿಗಳ ನೆರವಿನಲ್ಲಿ ಬಂದರೆ ಮಾತ್ರ ಕಚೇರಿಯಲ್ಲಿ ಕೆಲಸವಾಗುತ್ತವೆ ಎಂದು ಯಡಕೇರಿ ಗ್ರಾಮದ ಪುಟ್ಟಸ್ವಾಮಿ, ಪುನೀತ್ ಎಂಬುವವರು ದೂರಿದರು. ಮಣಜೂರು ಗ್ರಾಮದ ಗಿರೀಶ್ ಎಂಬುವವರು, ಕಳೆದ ಒಂದು ವರ್ಷದಿಂದ ನೂರಾರು ಬಾರಿ ೯೪ ಸಿಸಿ ಹಕ್ಕುಪತ್ರಕ್ಕಾಗಿ ಕಚೇರಿಗೆ ಬರುತ್ತಿದ್ದೇವೆ, ಇಲ್ಲಿಗೆ ಬಂದ ಎಲ್ಲ ತಹಸೀಲ್ದಾರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಹೊಸದಾಗಿ ಬಂದ ತಹಸೀಲ್ದಾರ್ ಮತ್ತೆ ಸ್ಥಳ ಪರಿಶೀಲನೆ ನಡೆಸಬೇಕು ಎನ್ನುತ್ತಾರೆ. ನಮಗೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ, ಸೋಮವಾರದ ಒಳಗಾಗಿ ಹಕ್ಕುಪತ್ರ ನೀಡದಿದ್ದರೆ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಮುಂದಿನ ದಿನಗಳಲ್ಲಿ ಎಲ್ಲ ಸರಿಯಾಗಲಿದೆ. ಸಾರ್ವಜನಿಕರನ್ನು ವಿನಾಕಾರಣ ಅಲೆಸಬೇಡಿ ಎಂದು ಶಿರಸ್ತೇದಾರ್‌ಗಳಾದ ರವಿಕುಮಾರ್ ಹಾಗೂ ಶ್ವೇತಾ ಎಂಬುವವರಿಗೆ ಶಾಸಕರು ಸೂಚನೆ ನೀಡಿದರು.