ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೆ ವತದಾನ ಮಾಡಲೇ ಬೇಕು ಎಂದು ನಂದವಾಡಗಿಯ ಮಹಾಂತ ಶ್ರೀಮಠದ ಪೂಜ್ಯ ಚನ್ನಬಸವ ಶ್ರೀಗಳು ನುಡಿದರು.ಗುರುವಾರ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ೨೦೨೪ರ ಪ್ರಯುಕ್ತ ಮತದಾರರಿಗೆ ಮತದಾನದ ಜಾಗೃತಿ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮತದಾನ ಒಂದು ಪವಿತ್ರ ಕಾರ್ಯ. ನಿಮ್ಮ ಒಂದು ಮತ ದೇಶದ ಭವಿಷ್ಯವನ್ನೆ ಬರೆಯಬಲ್ಲದು. ಕಾರಣ ನಂದವಾಡಗಿಯ ಗ್ರಾಮದ ಪ್ರತಿಯೊಬ್ಬ ಪ್ರಜೆಗಳು ಮತದಾನದ ದಿಂದ ವಂಚಿತರಾಗ ಬಾರದು ಎಂದು ಕಿವಿಮಾತು ಹೇಳಿದರು.
ಮತದಾನ ನಮ್ಮ ಹಕ್ಕು, ಅದು ನಮಗೆ ಪ್ರತಿ ಐದು ವರ್ಷಗಳಿಗೊಮ್ಮೆ ದೊರೆಯುತ್ತದೆ. ಉತ್ತಮ ನಾಯಕರನ್ನು ಆರಿಸುವ ಹಕ್ಕು, ಪ್ರತಿಯೊಬ್ಬ ಮತದಾರನದ್ದಾಗಿದೆ. ನಮ್ಮ ದೇಶದ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿ ಇದೆ. ತಾವು ಮತದಾನ ಮಾಡಿ ಇತರರಿಗೂ ಕೂಡ ಮತದಾನ ಮಾಡುವಂತೆ ತಿಳಿ ಹೇಳಬೇಕು. ಜನರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿಗಾಗಿ ಶ್ರಮಿಸುವವರಿಗೆ ತಮ್ಮ ಮತ ನೀಡುವಂತೆ ಹೇಳಿದರು.ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹುಮುಖ್ಯ ಮಹತ್ವ ಇದೆ. 18 ವರ್ಷ ತುಂಬಿದ ಅರ್ಹರು ಮತದಾನಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕು. ಹಾಗೂ ಈಗಾಗಲೇ ಮತದಾನದ ಹಕ್ಕು ಪಡೆದವರು ತಪ್ಪದೆ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು. ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಿಸಬಹುದು ಎಂದು ಮತದಾನದ ಮಹತ್ವವನ್ನು ತಿಳಿಸಿದರು.
ಚನ್ನಬಸವ ಶ್ರೀಗಳು ಹಾಗೂ ಕಾರ‍್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಅವರು ಸಸಿಗೆ ನೀರು ಹಾಕುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ಗಾಟಿಸಿದರು. ಈ ವೇಳೆ ಕಿರುನಾಟಕ ಹಾಗೂ ಕ್ಯಾಂಡಲ್ ಮೂಲಕ ಸಂಘದ ಸದಸ್ಯರಿಗೆ ಮತದಾನದ ಕುರಿತು ಮಾಹಿತಿ ಹೇಳಲಾಯಿತು. ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮತದಾನ ಜಾಗೃತಿ ಮೂಡಿಸುವ ರಂಗೋಲಿಗಳನ್ನು ಬಿಡಿಸಿದ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.ಸ್ವ ಸಹಾಯ ಸಂಘದ ಸದಸ್ಯರಿಗೆ ಮತದಾನ ಅರಿವು ಮೂಡಿಸಿ, ಕಡ್ಡಾಯವಾಗಿ ಮತದಾನ ಮಾಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಮತದಾರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಐಇಸಿ ಸಂಯೋಜಕರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಶ್ರೀ ನಿಧಿ ಸಂಜೀವಿನಿ ಒಕ್ಕೂಟದ ವ್ಯಾಪ್ತಿಯಡಿ ಬರುವಂತ ಸ್ವಸಹಾಯ ಸಂಘದ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.