ಪ್ರತಿಯೊಬ್ಬ ಭಾರತೀಯ ನಾಗರಿಕರು ೧೮ ವರ್ಷ ಪೂರ್ಣಗೊಂಡ ಬಳಿಕ ಸ್ವತಂತ್ರವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಅಧಿಕಾರವನ್ನು ಹೊಂದಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. ಭಾರತ ದೇಶ ಪ್ರತಿಯೊಬ್ಬರ ಆಸ್ತಿಯಾಗಿದ್ದು, ಸಂವಿಧಾನಬದ್ಧವಾಗಿ ಮತದಾನದ ಹಕ್ಕು ಎಲ್ಲರಿಗೂ ದೊರೆತಿದೆ. ಆದ್ದರಿಂದ ಮತ ಚಲಾಯಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಷ್ಟ್ರಕ್ಕೆ ಉತ್ತಮ ಮತ್ತು ಪ್ರಾಮಾಣಿಕ ನಾಯಕರನ್ನು ಆಯ್ಕೆ ಮಾಡಲು ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಅರುಣ ಕುಮಾರಿ ತಿಳಿಸಿದರು.ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಸಹಾಯಕ ಚುನಾವಣಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಪ್ರತಿಯೊಬ್ಬ ಭಾರತೀಯ ನಾಗರಿಕರು ೧೮ ವರ್ಷ ಪೂರ್ಣಗೊಂಡ ಬಳಿಕ ಸ್ವತಂತ್ರವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಅಧಿಕಾರವನ್ನು ಹೊಂದಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. ಭಾರತ ದೇಶ ಪ್ರತಿಯೊಬ್ಬರ ಆಸ್ತಿಯಾಗಿದ್ದು, ಸಂವಿಧಾನಬದ್ಧವಾಗಿ ಮತದಾನದ ಹಕ್ಕು ಎಲ್ಲರಿಗೂ ದೊರೆತಿದೆ. ಆದ್ದರಿಂದ ಮತ ಚಲಾಯಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು. ಮತದಾರರ ಪಟ್ಟಿಗೆ ಅರ್ಹರಾದ ಯುವಕರು ಸೇರ್ಪಡೆಯಾಗುವಂತೆ ಸುತ್ತಮುತ್ತಲವರನ್ನು ಪ್ರೋತ್ಸಾಹಿಸಬೇಕು.ಇಂದಿನ ಯುವ ಸಮುದಾಯವೇ ನಾಳಿನ ಭವಿಷ್ಯವಾಗಿದ್ದು, ದೇಶಕ್ಕೆ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಅಭಿವೃದ್ಧಿ ಹಾದಿಯಲ್ಲಿ ಸಾಗಲು ಮತದಾನ ಅತ್ಯಂತ ಅವಶ್ಯಕ ಎಂದು ಅವರು ಹೇಳಿದರು.ತಾಲೂಕು ದಂಡಾಧಿಕಾರಿಗಳು ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳಾದ ಜಿ ಎಸ್ ಶಂಕರಪ್ಪ ಮಾತನಾಡಿ, ಪ್ರತಿಯೊಬ್ಬ ನಾಗರಿಕರಲ್ಲಿಯೂ ರಾಜಕೀಯ ಪ್ರಜ್ಞೆ ಇರಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಪಣಕ್ಕಿಟ್ಟು ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರ ತ್ಯಾಗದ ಇತಿಹಾಸವನ್ನು ಅರಿತು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು. ಈ ವರ್ಷ ೧೬ನೇ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಮತದಾನ ಶೇಕಡಾವಾರು ಕುಸಿಯುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚು ಇದ್ದರೂ ನಗರ ಭಾಗದಲ್ಲಿಯೇ ಮತದಾನ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು. ಜಾತಿ-ಧರ್ಮವನ್ನು ಮೀರಿಸಿ ಮತದಾನ ಮಾಡಿ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು ಎಂದು ಹೇಳಿದರು. ೨೦೧೧ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಿಸಲಾಯಿತು. ಭಾರತದ ಚುನಾವಣಾ ಆಯೋಗದ ಧ್ಯೇಯವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಮ್ಮ ಭಾರತ, ನಮ್ಮ ಹಕ್ಕು ಈ ಬಾರಿಯ ಧ್ಯೇಯವಾಕ್ಯವಾಗಿದ್ದು, ಸ್ವೀಪ್ ಸಮಿತಿಯು ಅರ್ಹ ಮತದಾರರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ಮಾಡುತ್ತಿದೆ ಎಂದರು. ಕಳೆದ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಶೇಕಡವಾರು ಮತದಾನಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್‌ಒಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಮತಗಟ್ಟೆ ಸಂಖ್ಯೆ ೧೩೮ರಲ್ಲಿ ಕಾರ್ಯ ನಿರ್ವಹಿಸಿದ ಹರಳಹಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಬ್ಬಲಕ್ಷ್ಮಿ ಹಾಗೂ ಮತಗಟ್ಟೆ ಸಂಖ್ಯೆ ೧೭೮ ಚನ್ನರಾಯಪಟ್ಟಣ ನಗರ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯಾದ ಟಿ ಆರ್‌ ಸುಶೀಲಮ್ಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಅರುಣ ಕುಮಾರಿ, ತಹಸೀಲ್ದಾರ್ ಜೆ ಎಸ್ ಶಂಕರಪ್ಪ, ಶಿರಸ್ತೇದಾರ್‌ ಅನಿಲ್ ಕುಮಾರ್, ಚುನಾವಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಅಧಿಕಾರಿಗಳಾದ ಶ್ರೀಮತಿ ಜಯಲಕ್ಷ್ಮಿ, ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿಗಳಾದ ಚೇತನ್, ಶಿಕ್ಷಕರಾದ ಬೈರೇಶ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.