ಡಂಬಳ ಪೊಲೀಸ್‌ ಹೊರ ಠಾಣೆ ಮೇಲ್ದರ್ಜೆಗೆ ಯಾವಾಗ?

| Published : Oct 11 2023, 12:45 AM IST

ಸಾರಾಂಶ

ಡಂಬಳ ಹೋಬಳಿಯಲ್ಲಿ ಅಪರಾಧ, ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು, ಡಂಬಳದಲ್ಲಿ ಈಗಿರುವ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರು ಈ ಹಿಂದಿನ ಹಲವಾರು ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಲ್ಲ.

ಗ್ರಾಮಸ್ಥರು ಹಲವು ಸರ್ಕಾರಗಳ ಗೃಹ ಸಚಿವರಿಗೆ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲರಿಯಾಜಅಹ್ಮದ ದೊಡ್ಡಮನಿ

ಡಂಬಳ: ಡಂಬಳ ಪೊಲೀಸ್‌ ಹೊರ ಠಾಣೆ ಮೇಲ್ದರ್ಜೆಗೇರಿಸಲು ಈ ಹಿಂದಿನ ಸರಕಾರಗಳು ಮುಂದಾಗಿದ್ದರೂ ಜಾರಿಯಾಗಿಲ್ಲ. ಗ್ರಾಮಸ್ಥ ಬೇಡಿಕೆ ಇನ್ನೂ ಕೂಡಿಬಂದಿಲ್ಲ.ಡಂಬಳ ಹೋಬಳಿಯ 27 ಗ್ರಾಮಗಳಲ್ಲಿ 80 ಸಾವಿರ ಜನಸಂಖ್ಯೆ ಇದೆ. 10 ಗ್ರಾಮ ಪಂಚಾಯಿತಿ, 6 ತಾಲೂಕು ಪಂಚಾಯಿತಿ, 4 ಜಿಲ್ಲಾ ಪಂಚಾಯಿತಿ, ಸಸ್ಯಕಾಶಿ ಕಪ್ಪತ್ತಗುಡ್ಡ, ಐತಿಹಾಸಿಕ, ಪ್ರಾಚೀನ ಧಾರ್ಮಿಕ ಸ್ಥಳಗಳ ರಕ್ಷಣೆ ಮತ್ತು ಅಪರಾಧ, ಅಪಘಾತ ತಡೆಗಾಗಿ ಡಂಬಳ ಹೊರ ಠಾಣೆ ಮೇಲ್ದರ್ಜೆಗೇರಿಸುವ ಅಗತ್ಯತೆ ಇದೆ.

ಈ ಭಾಗದ ಜನತೆ ದೂರು ದಾಖಲಿಸಲು ಮುಂಡರಗಿಗೆ ತೆರಳಬೇಕಾಗಿದ್ದು, ಇದರಿಂದಾಗಿ ಸಾಮಾನ್ಯ ಜನರು ಪರಿತಪಿಸುವಂತಾಗಿದೆ.ಐತಿಹಾಸಿಕ ಠಾಣೆ: 1890ರ ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣವಾದ ಈ ಹೊರಠಾಣೆಗೆ 1 ಎಕರೆ 20 ಗುಂಟೆಯಷ್ಟು ಜಮೀನಿನಲ್ಲಿ ಪೊಲೀಸರ ವಸತಿಗೃಹಗಳು ಇದ್ದು, ಈಗೋ ಆಗೋ ಬೀಳುವ ಸ್ಥಿತಿಯಲ್ಲಿರುವ ಹೆಂಚಿನ ಹಳೆಯದಾದ ಕಟ್ಟಡವಾಗಿದ್ದರಿಂದ ಮೂಲಸೌಕರ್ಯದ ಕೊರತೆ ಉಂಟಾಗಿದೆ.

ಹೆಚ್ಚುತ್ತಿರುವ ಪ್ರಕರಣ: ಇತ್ತೀಚೆಗೆ ಈ ಭಾಗದಲ್ಲಿ ಅಪರಾಧ ಹಾಗೂ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸೂಕ್ತವಾದ ವಾಹನ ಇಲ್ಲದೆ ತೊಂದರೆ ಉಂಟಾಗಿದೆ. ಕೆಲ ಪೊಲೀಸರು ಮರಳು ಮಾಫಿಯಾ ತಡೆಯುವುದಕ್ಕಾಗಿ ಬೈಕ್‌ ಮೂಲಕ ಹೋದಾಗ ಅಪಘಾತಕ್ಕೆ ಒಳಗಾಗಿ ಜೀವಕಳೆದುಕೊಂಡ ಉದಾಹರಣೆಗಳೂ ಇವೆ.

ಅಪರಾಧ ತಡೆಯಲು ಹರಸಾಹಸ: ಹಳ್ಳಿಗುಡಿ-ಹಳ್ಳಿಕೇರಿ ಮಧ್ಯೆ ರೈಲೆ ಸ್ಟೇಷನ್, ರಾಷ್ಟ್ರೀಯ ಹೆದ್ದಾರಿ ಇರುವುದರಿಂದಾಗಿ ಈ ಭಾಗದಲ್ಲಿ ಅಪಘಾತಗಳು, ಅಪರಾಧ ಪ್ರಕರಣಗಳು ಮೇಲಿಂದ ಮೇಲೆ ಜರುಗುತ್ತಿವೆ. ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಟ, ಅಕ್ರಮವಾಗಿ ಅಕ್ಕಿ ಸಾಗಾಟ, ಮಟಕಾ, ಗಾಂಜಾ ಮಾರಾಟ ನಡೆಯುತ್ತಿವೆ ಎಂದು ಹಲವರು ದೂರಿದ್ದಾರೆ.

ಈ ಭಾಗದ ಕೆಲ ಯುವಕರು ಗೋವಾ, ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಕಾರಣ ಸೈಬರ್‌ ಪ್ರಕರಣಗಳು ಹೆಚ್ಚುತ್ತಿವೆ. ಇದಲ್ಲದೇ ಕೆಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ದೂರು ನೀಡಲು ಮಹಿಳೆಯರು, ಪುರುಷರು ಮುಂಡರಗಿ ಪೊಲೀಸ್‌ ಠಾಣೆಯನ್ನು ಅವಲಂಬಿಸಬೇಕಾಗಿದೆ.

ಸಭೆ ಸಮಾರಂಭಕ್ಕೆ ನಿಯೋಜನೆ:

ಇಲ್ಲಿಯ ಬೆರಳೆಣಿಕೆಯಷ್ಟು ಸಿಬ್ಬಂದಿಯನ್ನು ಜಿಲ್ಲೆಯ ಹಾಗೂ ಅಂತರ ಜಿಲ್ಲೆಯಲ್ಲಿ ಜರುಗುವ ಸಮಾವೇಶಗಳಿಗೆ, ಮಂತ್ರಿಗಳ ಸಭೆ ಸಮಾರಂಭಗಳಿಗೆ, ನ್ಯಾಯಾಲಯಗಳ ಪ್ರಕರಣಗಳಿಗೆ ನಿಯೋಜನೆಯಿಂದಾಗಿ ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಆಗದಂತಹ ಸ್ಥಿತಿ ಇದೆ.

ಐತಿಹಾಸಿಕ ಸ್ಥಳಗಳ ಸುರಕ್ಷತೆ, ಅಪರಾಧ ತಡೆಗಾಗಿ, ಡಂಬಳ ಪೊಲೀಸ್‌ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸುವುದರ ಮೂಲಕ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ರಾಮಪ್ಪ ಕೆ. ಹೇಳಿದರು.