ಸಾರಾಂಶ
ಸ್ನೇಹಿತರ ಜೊತೆ ಚಾಲೆಂಜ್ ಮಾಡಿಕೊಂಡು ಪರೀಕ್ಷೆ ಬರೆದೆ. ಎಸ್ಸೆಸ್ಸೆಲ್ಸಿಗೆ ಬಂದಾಗಲಿಂದಲೂ ಒಂದು ಯೋಜನೆ ಹಾಕಿಕೊಂಡು ಓದಿಕೊಂಡು ಬಂದೆ. ಮನೆಯಲ್ಲಿ, ಕೋಚಿಂಗ್ ಸೆಂಟರ್ ನಲ್ಲೂ ಒಳ್ಳೆಯ ಉತ್ತೇಜನ ಸಿಕ್ಕಿತು. ಈಗ ತುಂಬಾ ಖುಷಿ ಆಗುತ್ತಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ, ನೀಟ್ ಬರೆದು ಎಂಬಿಬಿಎಸ್ ಮಾಡುವ ಆಸೆ ಇದೆ.
ಕನ್ನಡಪ್ರಭ ವಾರ್ತೆ ಮೈಸೂರು
ನನ್ನ ಮಗ ಧನುಷ್‌ಗೆ ಪರೀಕ್ಷೆಯ ದಿನ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದರೂ ಪೇಯ್ನ್ ಕಿಲ್ಲರ್ ಇಂಜಕ್ಷನ್ ಪಡೆದು ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾನೆ ಎಂದು ಶಿವಕುಮಾರ್ ಹೇಳಿದರು.625ಕ್ಕೆ 625 ಅಂಕಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಧನುಷ್ ಪರೀಕ್ಷೆ ಬರೆಯುವಾಗ ಮಗ ಎದುರಿಸಿದ ಸಮಸ್ಯೆಯನ್ನು ತೆರೆದಿಟ್ಟರು.
ವಿಜ್ಞಾನ ಪರೀಕ್ಷೆ ಬರೆಯುವಾಗ ಮಗನಿಗೆ ಹೊಟ್ಟೆ ನೋವು ಬಂದಿತ್ತು. ನಮಗೆ ಆತಂಕ ಉಂಟಾಗಿತ್ತು. ಅಲ್ಲದೆ ಶಾಲೆಯ ಶುಲ್ಕ ಕಟ್ಟಲು ಫೀಸ್ ಕಟ್ಟುವಾಗಲೂ ಸಾಕಷ್ಟು ಸಮಸ್ಯೆ ಆಗಿತ್ತು. ಆಗೆಲ್ಲ ನನ್ನ ಮಗ ಸಾಧನೆ ಮಾಡುತ್ತಾನೆ ಅಂತಲೇ ಶಾಲಾ ಆಡಳಿತ ಮಂಡಳಿಗೆ ಹೇಳುತ್ತಿದ್ದೆ. ಈಗ ಮಗನ ಸಾಧನೆ ಬಹಳ ಸಂತೋಷ ತಂದಿದೆ ಎಂದು ಅವರು ಹೇಳಿದರು.ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿದ ಎಸ್. ಧನುಷ್, ಸ್ನೇಹಿತರ ಜೊತೆ ಚಾಲೆಂಜ್ ಮಾಡಿಕೊಂಡು ಪರೀಕ್ಷೆ ಬರೆದೆ. ಎಸ್ಸೆಸ್ಸೆಲ್ಸಿಗೆ ಬಂದಾಗಲಿಂದಲೂ ಒಂದು ಯೋಜನೆ ಹಾಕಿಕೊಂಡು ಓದಿಕೊಂಡು ಬಂದೆ. ಮನೆಯಲ್ಲಿ, ಕೋಚಿಂಗ್ ಸೆಂಟರ್ ನಲ್ಲೂ ಒಳ್ಳೆಯ ಉತ್ತೇಜನ ಸಿಕ್ಕಿತು. ಈಗ ತುಂಬಾ ಖುಷಿ ಆಗುತ್ತಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ, ನೀಟ್ ಬರೆದು ಎಂಬಿಬಿಎಸ್ ಮಾಡುವ ಆಸೆ ಇದೆ ಎಂದರು.
ಧನುಷ್ ತಾಯಿ ಸವಿತಾ ಮಾತನಾಡಿ, ಪರೀಕ್ಷೆ ಹಿಂದಿನ ದಿನ ಮಗ ಜ್ವರದಿಂದ ಬಳಲುತ್ತಿದ್ದ. ತುಂಬಾ ಆತಂಕ ಆಗಿತ್ತು. ಜ್ವರ ಇದ್ದರೂ ಕೂಡ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ತುಂಬ ಖುಷಿ ತಂದಿದೆ ಎಂದರು.