ಸಾರಾಂಶ
ಬೇಲೂರು ತಾಲೂಕಿನ ಹಳ್ಳಿಗದ್ದೆ ಶಾಂತಿ ಎಸ್ಟೇಟ್‌ನಲ್ಲಿ ಮೊದಲ ದಿನ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿಯಲಾಯಿತು.
ಬೇಲೂರು : ತಾಲೂಕಿನ ಹಳ್ಳಿಗದ್ದೆ ಶಾಂತಿ ಎಸ್ಟೇಟ್‌ನಲ್ಲಿ ಮೊದಲ ದಿನ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿಯಲಾಯಿತು.
ಅರಣ್ಯ ಇಲಾಖೆ ಪುಂಡಾನೆ ಕಾರ್ಯಾಚರಣೆಗೆ ಮುಂದಾಗಿದ್ದು, ಕ್ಯಾಪ್ಟನ್ ಪ್ರಶಾಂತ್ ಮತ್ತು ತಂಡದೊಂದಿಗೆ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು.
ತಾಲೂಕಿನ ಈಗಾಗಲೇ ಒಂಬತ್ತು ಮಂದಿಯ ಪ್ರಾಣವನ್ನು ಬಲಿ ಪಡೆದಿದ್ದು ಕಳೆದ ಒಂದು ತಿಂಗಳಲ್ಲಿ ಕಾಡಾನೆಗಳಿಂದ ನಾಲ್ಕು ಸಾವು ಸಂಭವಿಸಿತ್ತು. ಮೂರು ದಿನದ ಹಿಂದೆ ಕಾಫಿ ತೋಟದ ಕೆಲಸ ಮುಗಿಸಿಕೊಂಡು ಮನೆ ಬರುತ್ತಿದ್ದ ಕೂಲಿ ಕಾರ್ಮಿಕರಾದ ಸುಶೀಲಮ್ಮ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಬಳಿಕ ಎಚ್ಚೆತ್ತ ಅರಣ್ಯ ಮಂತ್ರಿಗಳು ನಾಲ್ಕು ಕಾಡಾನೆಗಳನ್ನು ಸ್ಥಳಾಂತರ ಮಾಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ಜೊತೆ ಏಳು ಸಾಕಾನೆಗಳು ಬಿಕ್ಕೋಡು ಬಳಿಯ ಸಸ್ಯಕ್ಷೇತ್ರಕ್ಕೆ ಆಗಮಿಸಿದ್ದು, ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಒಂದು ಪುಂಡಾನೆ ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆಯ ವಿಶೇಷ ಇಟಿಎಫ್ ತಂಡ ಸುಮಾರು ನಾಲ್ಕು ಗಂಟೆಗಳ ಪ್ರಯತ್ನದ ಬಳಿಕ ಯಶಸ್ಸು ಕಂಡಿದೆ. ಮೊದಲ ದಿನದ ಕಾರ್ಯಾಚರಣೆಯಲ್ಲೇ ಅರಣ್ಯ ಇಲಾಖೆ ತಂಡವು ಯಶಸ್ವಿಯಾಗಿದೆ. ಪುಂಡಾನೆಗಳನ್ನು ಗುರುತಿಸಿದ್ದ ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿ ಕಾರ್ಯಾಚರಣೆಯನ್ನು ಆರಂಭಿಸಿದರು. ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು.
ಚುಚ್ಚುಮದ್ದು ನೀಡುತ್ತಿದ್ದಂತೆಯೇ ಕಾಡಾನೆ ಹಿಂಡಿನ ಜೊತೆಗೆ ಇದ್ದ ಒಂಟಿಸಲಗ ಓಡಲು ಆರಂಭಿಸಿತು. ಒಂಟಿಸಲಗ ಒಂದು ಗಂಟೆಗೂ ಹೆಚ್ಚು ಕಾಲ ಗುಂಪಿನ ಜೊತೆ ಓಡಾಡಿ ನಂತರ ಬೇರ್ಪಟ್ಟ ನಂತರ ಒಂಟಿಸಲಗ ಕುಸಿದು ಬಿತ್ತು. ಕಾಡಾನೆಯನ್ನು ಸೆರೆ ಹಿಡಿಯಲು ಸಾಕಾನೆಗಳು ಹಾಗೂ ಸಿಬ್ಬಂದಿ ಸಾಕಷ್ಟು ಶ್ರಮ ವಹಿಸಿದ್ದರು.* ಬಾಕ್ಸ್: ಇಂತಹ ಹಲವು ಕಾರ್ಯಾಚರಣೆಗಳಾಗಿವೆ ಮೊನ್ನೆಯಷ್ಟೆ ಕಾಡಾನೆಯಿಂದ ಮಹಿಳೆಯೊಬ್ಬರ ಸಾವಾಗಿದೆ.
ಇದರ ಬೆನ್ನಲ್ಲೇ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ಭಾನುವಾರದಿಂದ ಕಾರ್ಯಾಚರಣೆ ಶುರುಮಾಡಲಾಗಿದೆ. ಆದರೆ, ಇಂತಹ ಕಾರ್ಯಾಚರಣೆಗಳಿಂದ ಕಾಡಾನೆ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಹಿಂದೆಯೂ ಈ ಭಾಗದಲ್ಲಿ ಇಂತಹ ಸಾಕಷ್ಟು ಕಾರ್ಯಾಚರಣೆಗಳು ನಡೆದಿವೆ. ಕಾಡಾನೆಗಳನ್ನು ಹಿಡಿದು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ದೂರಕ್ಕೆ ಸ್ಥಳಾಂತರಿಸುವ ಕೆಲಸ ಮಾಡಿದ್ದಾರೆ. ಆದರೆ, ಅದೇ ಕಾಡಾನೆಗಳು ಪುನಃ ಅದೇ ಸ್ಥಳಕ್ಕೆ ವಾಪಸ್ ಬಂದ ಉದಾಹರಣೆಗಳು ಸಾಕಷ್ಟಿವೆ.