ಗೆಲ್ಲುವ ಪಕ್ಷದಲ್ಲಿ ಪೈಪೋಟಿ ಹೆಚ್ಚಿದೆ: ಬಂಡಾಯವಿಲ್ಲ

| Published : Mar 24 2024, 01:33 AM IST

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪಕ್ಷವಾಗಿದ್ದು, ಇಲ್ಲಿ ಪೈಪೋಟಿ ಹೆಚ್ಚಿದೆ. ಇಲ್ಲಿ ಯಾವುದೇ ಅಸಮಾಧಾನ, ಬಂಡಾಯಗಳು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೋದಿಯವರ ಬದುಕಿನ ಗ್ಯಾರಂಟಿ ಮೇಲೆ ಚುನಾವಣೆಗೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪಕ್ಷವಾಗಿದ್ದು, ಇಲ್ಲಿ ಪೈಪೋಟಿ ಹೆಚ್ಚಿದೆ. ಇಲ್ಲಿ ಯಾವುದೇ ಅಸಮಾಧಾನ, ಬಂಡಾಯಗಳು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ರಂಭಾಪುರಿ ಪೀಠಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಇದ್ದ ಬಂಡಾಯ ಶಮನವಾಗಿದ್ದು, ಶಿವಮೊಗ್ಗದಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮ ನಾಯಕ ಈಶ್ವರಪ್ಪ ಅವರನ್ನು ಮನವೊಲಿಸಲು ಎಲ್ಲಾ ಪ್ರಯತ್ನ ನಡೆಯುತ್ತಿದೆ. ದಾವಣಗೆರೆಯಲ್ಲಿಯೂ ಕೂಡ ಯಾವುದೇ ಬಂಡಾಯವಿಲ್ಲ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ನವರು 28 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಆದರೆ ಅದನ್ನು ನಿರ್ಣಯ ಮಾಡುವುದು ಮತದಾರರು. ಜನರ ಅಪೇಕ್ಷೆ ನೋಡಿದರೆ ಖಂಡಿತವಾಗಿಯೂ ಬಿಜೆಪಿಗೆ 28 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ.ಮೋದಿಯವರು ಬದುಕನ್ನು ಕಟ್ಟಿಕೊಳ್ಳುವಲ್ಲಿ ಶಾಶ್ವತವಾಗಿ ಮಾಡಿರುವ ಸಹಾಯ, ಪರಿಹಾರ, ಯೋಜನೆಗಳ ಆಧಾರದಲ್ಲಿ ಈ ಚುನಾವಣೆ ನಡೆಯಲಿದೆ. ನಾವು ಕೇವಲ ಬದುಕಿನ ಗ್ಯಾರಂಟಿಯನ್ನು ಕೊಟ್ಟು ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್‌ನ ಗ್ಯಾರಂಟಿ ಯಾವುದೇ ರೀತಿಯ ಬದುಕನ್ನು ಕಟ್ಟಿಕೊಳ್ಳುವುದಲ್ಲ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ, ಮೋದಿಯವರ ಗ್ಯಾರಂಟಿ ಬಗ್ಗೆ ಸಂಪೂರ್ಣವಾಗಿದೆ ತಿಳಿದಿದೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಇಡೀ ದೇಶದ ಜನತೆ ದೊಡ್ಡ ಪ್ರಮಾಣದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಬೇಕು ಎಂಬ ಅಭಿಪ್ರಾಯವಿದೆ. ಹೀಗಾಗಿ ಬಿಜೆಪಿಗೆ ಭರ್ಜರಿ ಜಯ ದೊರೆಯಲಿದೆ. ಸಣ್ಣ ಚುನಾವಣೆಗಳಲ್ಲಿ ಕೆಲವು ಪರಿಣಾಮ ಬೀರಲಿದೆ. ಆದರೆ ದೊಡ್ಡ ಚುನಾವಣೆಯಲ್ಲಿ ಇದು ನಡೆಯಲ್ಲ ಎಂದರು.

ಲೋಕಸಭೆ ಚುನಾವಣೆಗೆ ಈಗಾಗಲೇ ಪೂರ್ವಭಾವಿಯಾಗಿ ರಾಜ್ಯ, ಜಿಲ್ಲಾ ಮಟ್ಟದ ಚುನಾವಣಾ ನಿರ್ವಹಣಾ ಸಭೆಗಳನ್ನು ಮಾಡಲಾಗಿದೆ. ಈ ಚುನಾವಣೆ ಕಚೇರಿ ಸಭೆಗಳನ್ನು ಉದ್ಘಾಟನೆ ಮಾಡಲಾಗಿದೆ. ಕೋರ್ ಕಮಿಟಿ ಸಭೆಗಳನ್ನು ನಡೆಸ ಲಾಗುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರ ಜೊತೆಗೆ ಸಂಪರ್ಕ ಮತ್ತು ಅಭಿಯಾನ ನಡೆಯುತ್ತಿದೆ. ಪಕ್ಷದ ಸಂಘಟನೆ ನಿರಂತರವಾಗಿದ್ದು, ಸಂಘಟಿತವಾದ ಪಕ್ಷ ನಮ್ಮದು. ಪ್ರತಿಯೊಂದು ಬೂತ್, ಗ್ರಾಮಗಳಲ್ಲೂ ಕೂಡ ನಮ್ಮ ಕಾರ್ಯಕರ್ತರ ಪಡೆಯಿದ್ದು, ಎಲ್ಲಾ ವರ್ಗದ ಜನ ನಮ್ಮ ಸಮಿತಿಯಲ್ಲಿ ಪದಾಧಿಕಾರಿಗಳಾಗಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದೆ ಎಂದರು.

ಜೆಡಿಎಸ್ ನಾಯಕರನ್ನು ಬಿಜೆಪಿ ಸಭೆಗೆ ಕರೆಯುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಜೆಡಿಎಸ್ ಪಕ್ಷದ ನಾಯಕರನ್ನು ಬಿಜೆಪಿ ಸಭೆಗಳಿಗೆ ಆಹ್ವಾನ ಮಾಡಬೇಕು ಎಂಬ ನಿರ್ಣಯ ಈಗಾಗಲೇ ಆಗಿದೆ. ಇಲ್ಲಿಯವರೆಗೆ ಸಂಪೂರ್ಣ ಸೀಟು ಹಂಚಿಕೆ ಆಗಿರಲಿಲ್ಲ. ಇನ್ನೊಂದು ಎರಡು ದಿನದಲ್ಲಿ ಅದು ಇತ್ಯರ್ಥವಾಗಲಿದೆ. ಅದು ಪೂರ್ಣಗೊಂಡ ಬಳಿಕ ಎರಡೂ ಪಕ್ಷಗಳು ಎಲ್ಲಾ ವೇದಿಕೆಗಳಲ್ಲಿ ಜಂಟಿ ಕ್ಯಾಂಪೇನ್ ಮಾಡಲಾಗುವುದು ಎಂದು ತಿಳಿಸಿದರು.೨೩ಬಿಹೆಚ್‌ಆರ್ ೩:

ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದರು.