ಕಾಂಗ್ರೆಸ್ ಪಕ್ಷ ಕೇವಲ ಒಬ್ಬರದ್ದಲ್ಲ. ಪ್ರತಿಯೊಬ್ಬ ಕಾರ್ಯಕರ್ತರದ್ದು. ಆದ್ದರಿಂದ ಕಾಂಗ್ರೆಸ್ ಭವನಕ್ಕೆ ಕಾರ್ಯಕರ್ತರು ೧೦೦ ರುಪಾಯಿಗಳ ಹಣ ನೀಡಿ ರಶೀದಿ ಪಡೆಯಿರಿ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಕೆಪಿಸಿಸಿ ಕಚೇರಿಯ ಆದೇಶದಂತೆ ಪ್ರತಿಯೊಬ್ಬ ಕಾರ್ಯಕರ್ತರಲ್ಲೂ ಕನಿಷ್ಠ ೧೦೦ ಹಣ ಕಟ್ಟಿಸಿಕೊಂಡು ರಶೀದಿ ನೀಡಲು ತಿಳಿಸಿದ್ದು ಅದರಂತೆ ಮುಖಂಡರು ಕೆಲಸ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕಾಂಗ್ರೆಸ್ ಪಕ್ಷ ಕೇವಲ ಒಬ್ಬರದ್ದಲ್ಲ. ಪ್ರತಿಯೊಬ್ಬ ಕಾರ್ಯಕರ್ತರದ್ದು. ಆದ್ದರಿಂದ ಕಾಂಗ್ರೆಸ್ ಭವನಕ್ಕೆ ಕಾರ್ಯಕರ್ತರು ೧೦೦ ರುಪಾಯಿಗಳ ಹಣ ನೀಡಿ ರಶೀದಿ ಪಡೆಯಿರಿ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅವರು ಪಟ್ಟಣದ ಹೊಸಬಸ್ ನಿಲ್ದಾಣದ ಹತ್ತಿರ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಇರುವ ಕಾಂಗ್ರೆಸ್ ಭವನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ನಿಷ್ಠೆಯಿಂದ ಪಕ್ಷ ಕಟ್ಟಿದ್ದು ಕಾಂಗ್ರೆಸ್ ಭವನ ಕೂಡ ಅವರ ಋಣಿಯಲ್ಲಿ ಇರಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಕಚೇರಿಯ ಆದೇಶದಂತೆ ಪ್ರತಿಯೊಬ್ಬ ಕಾರ್ಯಕರ್ತರಲ್ಲೂ ಕನಿಷ್ಠ ೧೦೦ ಹಣ ಕಟ್ಟಿಸಿಕೊಂಡು ರಶೀದಿ ನೀಡಲು ತಿಳಿಸಿದ್ದು ಅದರಂತೆ ಮುಖಂಡರು ಕೆಲಸ ಮಾಡಬೇಕು,ಪ್ರತಿಯೊಂದು ಬೂತ್ ಕಾರ್ಯಕರ್ತರೂ ನಮ್ಮ ಮುಖಂಡರೇ, ಎಲ್ಲಾ ಊರುಗಳಿಂದ ಬಂದಿದ್ದೀರಾ ಕಾಂಗ್ರೆಸ್ ಪಕ್ಷದ ಸಂಸಾರದ ಭವನ ಇದಾಗುತ್ತೆ ಅದಕ್ಕೆ ತಾವೆಲ್ಲಾ ಸಹಕಾರ ಕೊಡಬೇಕು. ಪೊರಕೆ ಕಡ್ಡಿ ಒಂದನ್ನಾದರೂ ಮುರಿಯಬಹುದು ಆದರೆ ಒಟ್ಟಾದರೆ ಮುರಿಯೋಕೆ ಆಗುತ್ತಾ, ಒಟ್ಟಾಗಿದ್ದರೆ ಮಾತ್ರ ಶಕ್ತಿ ಬರುತ್ತದೆ. ಈ ವರ್ಷ ಚುನಾವಣೆಗಳ ಸಾಲು ಸಾಲು ಇದ್ದು ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಗೆ ಹೆಚ್ಚು ಕೆಲಸ ಮಾಡಬೇಕು.ಈ ವರ್ಷ ನಾವು ಗ್ರಾಮ ಪಂಚಾಯಿತಿ ಎಲೆಕ್ಷನ್ನು ಮಾಡಬೇಕು ಹಾಗೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಯಾಗಬೇಕು, ಮುನ್ಸಿಪಾಲ್ಟಿಗಳಿಗೂ ಕೂಡ ಎಲೆಕ್ಷನ್ ಮಾಡಬೇಕು ಅಂತ ಹೇಳಿದರೆ ಈಗಿನಿಂದಲೇ ನಾವು ಪಕ್ಷ ಸಂಘಟನೆ ಕಡೆಗೂ ಕೂಡ ಗಮನ ಕೊಡಬೇಕು ಮತ್ತು ನಮ್ಮ ಸರ್ಕಾರ ಏನು ಮಾಡಿಲ್ಲ ಎಂಬ ವಿರೋಧಿಗಳ ಬಾಯಿ ಮುಚ್ಚಿಸಲು ನಾವು ನೀಡಿದ ೫ ಗ್ಯಾರಂಟಿ ಯೋಜನೆಗಳೆ ಜನರ ಮುಂದೆ ತೆರೆದಿಟ್ಟಿದ್ದೇವೆ, ದೇಶದಲ್ಲೇ ಇದು ಮೊದಲ ಗ್ಯಾರಂಟಿಯಾಗಿದ್ದು ಸಮರ್ಥವಾಗಿ ೫ವರ್ಷವೂ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿ ಪ್ರಚಾರ ನಡೆಸಿ ಗೃಹಲಕ್ಷ್ಮೀ ಯೋಜನೆಯನ್ನು ಯಾವ ಸರ್ಕಾರ ಪ್ರಪಂಚದಲ್ಲಿ ಮಾಡಿಲ್ಲ ಅದು ಕರ್ನಾಟಕದಲ್ಲಿ ಮಾತ್ರ ಮೊದಲ ಬಾರಿಗೆ ಮಾಡಿದ್ದೇವೆ, ಕಾಂಗ್ರೆಸ್ ಸರ್ಕಾರ ಇಲ್ಲ ಎನ್ನುವ ಕೆಲವರು ಕರ್ನಾಟಕ್ಕೆ ಬಂದು ನೋಡಲು ಎಷ್ಟು ಅಭಿವೃಧ್ಧಿ ಮಾಡಿದ್ದೇವೆ ಎಂದರು. ಭೂ ಗ್ಯಾರಂಟಿ ಎಂಬ ಯೋಜನೆಯು ರೈತರಿಗೆ ಎಷ್ಟು ಅನುಕೂಲವಾಗಿದೆ ಎಂದರೆ ಕೇವಲ ೩ ದಾಖಲೆಗಳನ್ನು ನೀಡಿದರೆ ಸಾಕು ತಮ್ಮ ಪೌತಿ ಖಾತೆಗಳು ಆಗುತ್ತವೆ ಅದು ಯಾವುದೇ ದಳ್ಳಾಳಿಗಳಿಲ್ಲದೆ ರೈತರ ಮನೆ ಬಾಗಿಲಿಗೆ ನೇರವಾಗಿ ಸರ್ಕಾರ ಬಂದು ಕೆಲಸ ಮಾಡಿಕೊಡುತ್ತಿದೆ ಇಂತಹ ಯೋಜನೆಯನ್ನು ಯಾವ ಸರ್ಕಾ ಕೂಡ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.

ಬಿ. ಎಂ. ರಸ್ತೆಯಿಂದ ಕಾಂಗ್ರೆಸ್ ಭವನದ ತನಕ ಪೂರ್ಣ ಕುಂಭದೊಂದಿಗೆ, ಚಂಡೆ ವಾದ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ಬರಮಾಡಿಕೊಂಡು ಪಟಾಕಿ ಸಿಡಿಸಿ ಜೈಕಾರ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಕವಿಕಾ ನಿಗಮದ ಅಧ್ಯಕ್ಷ ಲಲಿತ್ ರಾಘವ್ ಅವರು ೧೫ ಲಕ್ಷ ರು. ಭವನ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರು, ಮಂಜೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಣತಿ ಆನಂದ್, ಎಂ. ಶಂಕರ್, ಜಾವಗಲ್‌ಮಂಜುನಾಥ್, ಸಿ. ವಿ. ರಾಜಪ್ಪ, ಎಂ. ಎ. ರಂಗಸ್ವಾಮಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮೂರ್ತಿ ಮತ್ತಿತರಿದ್ದರು.