ಸಾರಾಂಶ
ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ಯೋಗ ಮಾಡುತ್ತಾ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ನೂರಾರು ವರ್ಷ ಬದುಕುತ್ತಿದ್ದರು. ಅವರೆಲ್ಲರ ಆಯುಷ್ಯದ ಗುಟ್ಟು ಯೋಗವೇ ಆಗಿತ್ತು. ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಸದೃಢರಾಗಲು ಯೋಗವನ್ನು ರೂಢಿಸಿಕೊಳ್ಳಬೇಕೆಂದು ಯೋಗ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಚಿನ್ನದ ಪದಕ ವಿಜೇತೆ ಬಿ. ಪ್ರತಿಕ್ಷಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ಯೋಗ ಮಾಡುತ್ತಾ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ನೂರಾರು ವರ್ಷ ಬದುಕುತ್ತಿದ್ದರು. ಅವರೆಲ್ಲರ ಆಯುಷ್ಯದ ಗುಟ್ಟು ಯೋಗವೇ ಆಗಿತ್ತು. ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಸದೃಢರಾಗಲು ಯೋಗವನ್ನು ರೂಢಿಸಿಕೊಳ್ಳಬೇಕೆಂದು ಯೋಗ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಚಿನ್ನದ ಪದಕ ವಿಜೇತೆ ಬಿ. ಪ್ರತಿಕ್ಷಾ ತಿಳಿಸಿದರು. ನಗರದ ನೇತಾಜಿ ಭವನದಲ್ಲಿ ಶ್ರೀ ನೇತಾಜಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಸಂಸ್ಥಾಪಕ ದಿನಾಚರಣೆ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಾತ್ಯ ದೇಶಗಳಿಗೆ ಯೋಗ ಕಲಿಸಿ ವಿಶ್ವಗುರು ಎನಿಸಿದ ಭಾರತ ದೇಶ ಪ್ರಪಂಚಕ್ಕೆ ಮಾದರಿಯಾಗಿದೆ. ಇತ್ತೀಚಿನ ಜೀವನ ಪದ್ಧತಿಯಲ್ಲಿ ಕುಳಿತು ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೆ ರೋಗವು ವರವಾಗಿ ಪರಿಣಮಿಸಿದೆ. ಜೊತೆಗೆ ಜಂಕ್ ಫುಡ್‌ಗಳ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಭವಿಷ್ಯದ ಜೀವನಕ್ಕೆ ಮಾರಕ ಅನಿಸುತ್ತಿದೆ. ಆದ್ದರಿಂದ ದಿನದ ಒಂದು ಗಂಟೆ ಯೋಗಕ್ಕೆ ಮೀಸಲಿರಿಸಬೇಕು. ಹಿಂದಿನ ತಪಸ್ವಿಗಳು, ಋಷಿಮುನಿಗಳು ಮೌನ, ಧ್ಯಾನ ಮತ್ತು ಯೋಗಕ್ಕೆ ಆದ್ಯತೆ ನೀಡಿ ನೂರಾರು ವರ್ಷ ಬದುಕುತ್ತಿದ್ದರು. ಯೋಗದಲ್ಲಿ ಶವಾಸನ ಅತ್ಯುತ್ತಮ ಯೋಗವಾಗಿದೆ ಎಂದು ಯೋಗದ ಆಸನಗಳು ಮತ್ತು ಭಂಗಿಗಳ ಮತ್ತು ಉಪಯೋಗಗಳ ಮಾಹಿತಿಯನ್ನು ಪರದೆಯ ಮೇಲೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಒತ್ತಡದ ಜೀವನ ನಡೆಸುತ್ತಿರುವ ಮಹಿಳೆಯರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಯೋಗ ಮಹಿಳೆಯರಿಗೆ ಅವಶ್ಯಕವಾಗಿದೆ. ಇಲ್ಲಿ ಯಾವುದೇ ಹಣ ಪಡೆಯದೆ ಉಚಿತ ಯೋಗ ಶಿಕ್ಷಣ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು. ನ್ಯಾಯಾಂಗ ಇಲಾಖೆ ಆಡಳಿತಾಧಿಕಾರಿ ಅಶೋಕ್ ಮಾತನಾಡಿ ದೇವರು, ಆಧ್ಯಾತ್ಮ ಜ್ಞಾನಕ್ಕೆ ಒಲವು ತೋರಿದವರು ಯೋಗ ಅಭ್ಯಾಸದ ಕಡೆ ಆಕರ್ಷಿತರಾಗುತ್ತಾರೆ. ಉಸಿರು, ಆರೋಗ್ಯ ಸದೃಢತೆ ಹಣವಿಲ್ಲದೆ ಕಾಪಾಡುವ ವ್ಯಾಯಾಮವೇ ಯೋಗ. ಉಚಿತವಾಗಿ ಕಲಿತು ದೇಹದ ಸದೃಢತೆ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಕೆ.ಎಂ ರಾಜಣ್ಣ ಮಾತನಾಡಿ, ಯೋಗವು ನಮ್ಮ ಸಂಸ್ಕೃತಿ ಹಾಗೂ ಭಾರತೀಯ ಪದ್ಧತಿಯಾಗಿದ್ದು, ಅದನ್ನು ನಾವು ಉಳಿಸಿ ಬೆಳೆಸಬೇಕು. ಬೆಳಗಿನ ಸಮಯದಲ್ಲಿ ಯೋಗಾಸನ ಹಾಗೂ ಧ್ಯಾನ ಮಾಡಿದರೆ ದಿನವಿಡಿ ಯಾವುದೇ ರೀತಿಯ ಗೊಂದಲ, ಆತಂಕವಿಲ್ಲದೆ ತಮ್ಮ ಕೆಲಸಗಳನ್ನು ಮಾಡಬಹುದು. ನಮ್ಮ ಟ್ರಸ್ಟಿನಲ್ಲಿ ಯಾವುದೇ ಜಾತಿ, ಭೇದ, ಹಣಲ್ಲದೆ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ನೇತಾಜಿ ಸಹಕಾರಿ ಸಂಘದ ಅಧ್ಯಕ್ಷ ಶಶಿಕಿರಣ್, ಟಸ್ಟಿನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರು, ನೂರಾರು ಯೋಗಪಟುಗಳು ಭಾಗವಹಿಸಿದ್ದರು. ಕು. ತನುಷಾರವರ ಭರತನಾಟ್ಯ ಎಲ್ಲರ ಗಮನಸೆಳೆಯಿತು.