ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದ ವಿವಿಧ ಕಡೆಗಳಲ್ಲಿ ಶನಿವಾರ ಮಿಂಚಿನ ಸಂಚಾರ ನಡೆಸಿದ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಅಧಿಕಾರಿ-ಸಿಬ್ಬಂದಿಗಳಿಗೆ ಸರ್ಕಾರಿ ಸೇವೆಯ ಪಾಠ ಬೋಧಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ ಶಿಂಧೆ ಹುಕ್ಕೇರಿಗೆ ಆಗಮಿಸಿ ತಾಲೂಕಿನ ಅಧಿಕಾರಿ-ಸಿಬ್ಬಂದಿ ವಲಯದಲ್ಲಿ ಸಂಚಲನ ಮೂಡಿಸಿದರು.ತಾಲೂಕು ಪಂಚಾಯಿತಿಯಲ್ಲಿ ಸಿಇಒ ಶಿಂಧೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬರ ನಿರ್ವಹಣೆಯನ್ನು ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಎದುರಿಸಬೇಕು. ಒಂದು ವೇಳೆ ಈ ಕರ್ತವ್ಯದಲ್ಲಿ ಉದಾಸೀನತೆ ತೋರಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಖಾಸಗಿ ಬೋರವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರಗಳ ಮೂಲಕ ನೀರು ಪೂರೈಸಬೇಕು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅನುದಾನದಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಸಿ ನೀರು ಒದಗಿಸುವ ಬಗ್ಗೆ ಪ್ರಸ್ತಾವಣೆಗಳನ್ನು ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.ಗ್ರಾಪಂಗಳಲ್ಲಿ 15ನೇ ಹಣಕಾಸು ಯೋಜನೆ, ಉದ್ಯೋಗ ಖಾತರಿ, ತಾಪಂನ ಅನಿರ್ಬಂಧಿತ ಅನುದಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಅನುದಾನ ವಾಪಸ್ ಸರ್ಕಾರಕ್ಕೆ ಮರಳಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
ಬೆಣಿವಾಡ ಪ್ರಾಥಮಿಕ ಆರೋಗ್ಯ ಅಧಿಕಾರಿ ಹುದ್ದೆ ಭರ್ತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಆರೋಗ್ಯ ಇಲಾಖೆಯ ಎಲ್ಲ ಬಿಲ್‌ಗಳನ್ನು ತಾಪಂ ಮೂಲಕ ಜಿಪಂಗೆ ಸಲ್ಲಿಸಬೇಕು. ಗುಣಮಟ್ಟದ ಶಾಲಾ ಕೊಠಡಿಗಳನ್ನು ನಿರ್ಮಿಸಬೇಕು. ಬಿಸಿಯೂಟ ಹಾಗೂ ಕ್ಷೀರಭಾಗ್ಯ ಪೂರೈಕೆಯಲ್ಲಿ ಯಾವುದೇ ದೋಷವಾಗದಂತೆ ನಿಗಾ ವಹಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.ಉಪವಿಭಾಗಾಧಿಕಾರಿ ಬಸವರಾಜ ಕಲಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಪಾಂಡುರಂಗರಾವ, ತಹಸೀಲ್ದಾರ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಎಇಇಗಳಾದ ಎಂ.ಎಸ್.ಬಿರಾದಾರ ಪಾಟೀಲ, ವಿಜಯ ಮಿಶ್ರಿಕೋಟಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರಿ, ಅಭಿಯಂತರರಾದ ಬಿ.ಡಿ.ನಾಯಿಕವಾಡಿ, ಶಶಿಧರ ಭೂಸಗೋಳ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಟಿಎಚ್‌ಒ ಡಾ.ಉದಯ ಕುಡಚಿ, ಬಿಇಒ ಪ್ರಭಾವತಿ ಪಾಟೀಲ, ಬಿಸಿಯೂಟ ಅಧಿಕಾರಿ ಸವಿತಾ ಹಲಕಿ, ಸಿಬ್ಬಂದಿ ಆರ್.ಎನ್.ವಂಜಿರೆ, ಶಂಕರ ಕಾಂಬಳೆ, ನಾಗಲಿಂಗ ಮಾಳಗೆ, ಅರ್ಷದ ನೇರ್ಲಿ, ಶಂಕರ ಶಿರಗುಪ್ಪಿ, ಮಹಾಂತೇಶ ಬಾದವಾನಮಠ ಮತ್ತಿತರರು ಇದ್ದರು.
---------ಬಾಕ್ಸ್
ಚುನಾವಣೆ ಸಿದ್ಧತೆ ಪರಿಶೀಲನೆತಹಸೀಲ್ದಾರ ಕಚೇರಿ ಬಳಿ ಸಭಾಭವನದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸಭೆ ನಡೆಸಿದ ಜಿಪಂ ಸಿಇಒ ರಾಹುಲ ಶಿಂಧೆ ಅವರು, ಲೋಕಸಭೆ ಚುನಾವಣೆ ಸಿದ್ಧತೆಗಳ ಮಾಹಿತಿ ನೀಡಿದರು. ಸಮನ್ವಯತೆ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದ ಲೋಕಸಭೆ ಚುನಾವಣೆ ಯಶಸ್ವಿಗೊಳಿಸಬಹುದು ಎಂದರು. ಬಳಿಕ ಎಸ್.ಕೆ. ಹೈಸ್ಕೂಲನಲ್ಲಿ ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಸ್ಟರಿಂಗ್, ಡಿಮಾಸ್ಟರಿಂಗ್ ಹಾಗೂ ಸ್ಟ್ರಾಂಗರೂಂಗಳನ್ನು ಪರಿಶೀಲಿಸಿದರು. ಚುನಾವಣಾ ಸಿಬ್ಬಂದಿಗೆ ಊಟ, ನೀರು ವ್ಯವಸ್ಥಿತವಾಗಿ ಪೂರೈಸಲು ಸೂಚಿಸಿದರು.