ಸಾರಾಂಶ
ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ 1.14 ಲಕ್ಷ ರು. ಮೌಲ್ಯದ ಬಂಗಾರದ ಸರಗಳ್ಳತನ ಮಾಡಿದ ಮರಾಠಿ ಗುರುಪ್ರಸಾದ ಎಂಬಾತನನ್ನು ಕಳ್ಳತನ ನಡೆದ ಎರಡೇ ದಿನಗಳಲ್ಲಿ ದಸ್ತಗಿರಿ ಮಾಡಿದ್ದಾರೆ.
ಹಾನಗಲ್ಲ: ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ 1.14 ಲಕ್ಷ ರು. ಮೌಲ್ಯದ ಬಂಗಾರದ ಸರಗಳ್ಳತನ ಮಾಡಿದ ಮರಾಠಿ ಗುರುಪ್ರಸಾದ ಎಂಬಾತನನ್ನು ಕಳ್ಳತನ ನಡೆದ ಎರಡೇ ದಿನಗಳಲ್ಲಿ ದಸ್ತಗಿರಿ ಮಾಡಿದ್ದಾರೆ.
ಮಾಂಗಲ್ಯ ಸರವನ್ನು ಹಾನಗಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಾನಗಲ್ಲ ಸಿಪಿಐ ಎನ್.ಎಚ್.ಆಂಜನೇಯ ತಿಳಿಸಿದ್ದಾರೆ. ಫೆ. 9ರಂದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಕ್ಕಿಆಲೂರಿನ ಕುಮಾರ ನಗರದ ರಸ್ತೆಯೊಂದರಲ್ಲಿ ಬರುತ್ತಿರುವಾಗ ನಿರ್ಮಲಾ ಹುಡೇದ ಎಂಬುವವರ ಕೊರಳಲ್ಲಿನ 1.14 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ. ಈತ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಈ ಕೃತ್ಯ ಎಸಗಿದ್ದನು ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾವೇರಿ ಎಸ್‌ಪಿ, ಹೆಚ್ಚುವರಿ ಎಸ್‌ಪಿ, ಶಿಗ್ಗಾವಿ ಡಿವಾಯ್‌ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎನ್.ಎಚ್.ಆಂಜನೇಯ ನೇತೃತ್ವದ ತಂಡ ಆರೋಪಿತನನ್ನು ಪತ್ತೆ ಮಾಡುವಲ್ಲಿ ಪಿಎಸ್‌ಐ ಸಂಪತ್ ಆನಿಕಿವಿ, ದೀಪಾಲಿ ಗುಡೋಡಗಿ, ಸಿಬ್ಬಂದಿ ಎಸ್.ಬಿ. ಕೂಸನೂರ, ಎನ್.ಎಚ್. ಡೋಲೆ, ಈರಣ್ಣ ಲಂಗೋಟಿ, ಬಾಹುಬಲಿ ಉಪಾದ್ಯಾ, ಎಲ್.ಎಲ್. ಪಾಟೀಲ, ಇಲಿಯಾಸ್ ಶೇಖಸನದಿ, ಆನಂದ ಪಾಟೀಲ, ಅನಿಲ ಮಡಿವಾಳರ, ಭೀಮಣ್ಣ ಗೋಡಿಹಾಳ, ಸಂತೋಷ ಮ್ಯಾಗೇರಿ, ಆನಂದ ಪಾಟೀಲ, ಜಿ.ವಿ. ಹುರಕಡ್ಲಿ ಕಾರ್ಯಪ್ರವೃತ್ತರಾಗಿದ್ದರು. ಫೆ.12 ರಂದು ಬೆಳಿಗ್ಗೆ ಹಾವೇರಿ ಜಾನುವಾರು ಮಾರುಕಟ್ಟೆಯ ಹತ್ತಿರ ಆರೋಪಿ ಮರಾಠಿ ಗುರುಪ್ರಸಾದ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ. ಈತ ರಾಣಿಬೆನ್ನೂರಿನ ಮೃತ್ಯುಂಜಯ ನಗರದಲ್ಲಿದ್ದು, ಗೌಂಡಿ ಕೆಲಸ ಮಾಡಿಕೊಂಡಿದ್ದಾನೆ. 1.14 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನಕ್ಕಾಗಿ ಬಳಸಿದ ಬಜಾಜ ಪಲ್ಸರ್ ಬೈಕ್ ಸಹ ವಶಪಡಿಸಿಕೊಳ್ಳಲಾಗಿದೆ. ಈತ ಚಿತ್ರದುರ್ಗ, ತುಮಕೂರು, ಗದಗ, ಬಳ್ಳಾರಿ, ಹಾವೇರಿ ಜಿಲ್ಲೆ ಸೇರಿದಂತೆ ವಿವಿಧೆಡೆ 35 ಪ್ರಕರಣಗಳಲ್ಲಿ ಈತ ಆರೋಪಿ ಎಂಬ ದಾಖಲೆಗಳಿವೆ ಎಂದು ಹಾನಗಲ್ಲ ಪೊಲೀಸ್ ನಿರೀಕ್ಷಕ ಎನ್.ಎಚ್. ಆಂಜನೇಯ ತಿಳಿಸಿದ್ದಾರೆ.