ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರೊಂದರಲ್ಲಿ ₹1.15 ಕೋಟಿ ಹಣ ದೊರೆತಿದ್ದು, ಅದನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ಸಂಜೆ ನಡೆದಿದೆ.ಕಾರಿನಲ್ಲಿ ಡೂಪ್ಲಿಕೇಟ್‌ ನಂಬರಪ್ಲೇಟ್‌ ಅಳವಡಿಸಲಾಗಿದೆ. ಆಲ್ಟ್ರೋಜ್ ಕಾರಿನ ನಂಬರ್‌ ಪ್ಲೇಟ್‌ ಅಳವಡಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಆರ್‌ಟಿಒ ಪಾಸಿಂಗ್ ಹೊಂದಿರುವ ಈ ಕಾರು ಅಸಲಿಗೆ ಕ್ರೇಟಾ ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಈ ವಿಷಯವನ್ನು ಸ್ಥಳೀಯರು ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಉದ್ದಪ್ಪ ಧರೇಪ್ಪನವರ್, ಸುನೀಲ್ ಹುಲ್ಲೋಳ್ಳಿ, ಎಎಸ್‌ಐ ರಿತೇಶ ನಾಗೇಕರ್, ಹವಾಲ್ದಾರ್ ಸಂತೋಷ ಹಾಗೂ ಸಿಬ್ಬಂದಿ ಮಾಹಿತಿ ಪಡೆದು ಪರಿಶೀಲಿಸಿ, ಪಂಚನಾಮೆ ಮಾಡಿ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಕಬ್ಬಿಣದ ಬಾಕ್ಸ್ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ ₹1.15 ಕೋಟಿ ಹಣ ಇರುವುದು ಕಂಡುಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ ಅಕೌಂಟ್‌ ಹ್ಯಾಕ್‌ ಮಾಡಿ 33 ಲಕ್ಷ ಹಣ ವರ್ಗಾವಣೆ

ಅಂಕೋಲಾ: ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಆರ್‌ಟಿಜಿಎಸ್‌ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡಿ ₹33,42,845 ಹಣವನ್ನು ಕದ್ದಿದ್ದಾರೆ.

ಈ ಕುರಿತು ಕಾರವಾರದಲ್ಲಿ ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ.

ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡರಿಂದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆರ್‌ಟಿಜಿಎಸ್‌ ಮಾಡಿದ ₹5 ಲಕ್ಷ, ವೆಂಕಟೇಶ್ವರ ಗ್ಯಾಸ್ ಸೆಂಟರ್‌ನಿಂದ ವೆಂಕಟೇಶ್ವರ ಗ್ಯಾಸ್ ಸೆಂಟರ್‌ಗೆ ಆರ್‌ಟಿಜಿಎಸ್‌ ಮಾಡಿದ ₹5,46,000 ಲಕ್ಷ, ಜತೆಗೆ ಇವರದೇ ಮತ್ತೊಂದು ಖಾತೆಗೆ ₹6,60,000 ಲಕ್ಷ, ಸವಿತಾ ವೆಂಕಟರಮಣ ನಾಯ್ಕರಿಂದ ಟಾಫೆ ಅಕ್ಸೆಸ್‌ ಲಿ.ಗೆ ಆರ್‌ಟಿಜಿಎಸ್‌ ಮಾಡಿದ ₹16,36,895 ಲಕ್ಷ ಸೇರಿ ಒಟ್ಟು ₹33,42,895 ಲಕ್ಷ ಹಣವು ಆರ್‌ಟಿಜಿಎಸ್‌ ಮಾಡಿದ ಖಾತೆಗೆ ಜಮೆ ಆಗದೇ ಹ್ಯಾಕ್ ಆಗಿದ್ದು, ಸೈಬರ್ ಕಳ್ಳರ ಖಾತೆಗೆ ಜಮ ಆಗಿದೆ ಎಂದು ದೂರು ನೀಡಲಾಗಿದೆ.

ಇನ್ನು ಯಾರ ಖಾತೆಗೆ ಜಮೆ ಆಗಿದೆ ಎಂದು ಈವರೆಗೂ ಮಾಹಿತಿ ತಿಳಿದಿಲ್ಲ. ಜ. 24ರಿಂದ ಜ. 27ರ ನಡುವೆ ಘಟನೆ ನಡೆದಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.