ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ನಗರದ ಪ್ರತಿಷ್ಠಿತ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿಗೆ ಸನ್ 2023-24ನೇ ಸಾಲಿನ ಮಾ.31 ಅಂತ್ಯಕ್ಕೆ ₹136.56 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ತಿಳಿಸಿದರು.ಈ ಕುರಿತು ಪಟ್ಟಣದ ವಿದ್ಯಾನಗರದ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬ್ಯಾಂಕಿಗೆ 2024 ಮಾರ್ಚ್ 31 ಕ್ಕೆ ಅಂತ್ಯಕ್ಕೆ 18043 ಸದಸ್ಯರು, ₹1186.85 ಲಕ್ಷ ಶೇರು ನಿಧಿ, ₹6687.25 ಲಕ್ಷ ನಿಧಿಗಳು, ₹39367.16 ಲಕ್ಷ ಠೇವುಗಳು, ₹48181.02 ಲಕ್ಷ ದುಡಿಯುವ ಬಂಡವಾಳ ಸೇರಿದಂತೆ ಒಟ್ಟು ₹136.56 ಲಕ್ಷ ಲಾಭ ಗಳಿಸಿದೆ. ಸಿಬ್ಬಂದಿಗಳು, ಗ್ರಾಹಕರ ಸಹಕಾರದಿಂದ ಸಹಕಾರಿ ಸಂಘ ಲಾಭದತ್ತ ಮುನ್ನುಗ್ಗುತ್ತಿದೆ. ಈಗಾಗಲೇ ಬ್ಯಾಂಕಿನಲ್ಲಿ ಗ್ರಾಹಕರಿಗೆ ಕ್ಯೂಆರ್.ಕೋಡ್, ಎಸ್.ಎಂ.ಎಸ್, ಆರ್.ಟಿ.ಜಿ.ಎಸ್. ಸೌಲಭ್ಯಗಳನ್ನು ಎಕ್ಸಿಸ್ ಬ್ಯಾಂಕಿನ ಸಹಕಾರದೊಂದಿಗೆ ಒದಗಿಸಲಾಗಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ವ್ಯವಹಾರವನ್ನು ರಾಜ್ಯಾದ್ಯಂತ ಎಲ್ಲ ಬೇರೆ ಬೇರೆ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯದಲ್ಲಿಯೇ ಈಗಿದ್ದ ಬಾಗಲಕೋಟೆ ತಾಲೂಕಿನ ಕಲಾದಗಿ ಶಾಖೆಯನ್ನು ಗದ್ದನಕೇರಿ ಕ್ರಾಸ್‌ಗೆ ಸ್ಥಳಾಂತರಿಸಲಾಗುವುದು. ಶೀಘ್ರದಲ್ಲೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ಬ್ಯಾಂಕಿನ ಹೊಸ ಶಾಖೆಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.ನಮ್ಮ ಸಂಘದ 60 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಆ.11ರಂದು 11 ಗಂಟೆಗೆ ಎಸ್.ವ್ಹಿ.ಪಿ.ಸಂಸ್ಥೆಯ ಬಸವಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಗ್ರಾಹಕರು, ಸದಸ್ಯರು, ಎಲ್ಲರೂ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಭಾರಿ ವ್ಯವಸ್ಥಾಪಕಿ ಎಂ.ಬಿ.ದೇಶಣ್ಣವರ, ವ್ಯವಸ್ಥಾಪಕ(ಸಾಲ) ಎಸ್.ವೈ.ಬಸರಿ, ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಕರಡಿ ಹಾಜರಿದ್ದರು.