ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಜಿಲ್ಲಾದ್ಯಂತ 1432 ಗಣೇಶ ಮೂರ್ತಿಗಳ ವಿಸರ್ಜನೆ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.

ಹೊಸಪೇಟೆ: ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಜಿಲ್ಲಾದ್ಯಂತ 1432 ಗಣೇಶ ಮೂರ್ತಿಗಳ ವಿಸರ್ಜನೆ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.

ಹೊಸಪೇಟೆ ನಗರದ 35 ವಾರ್ಡ್‌ಗಳಲ್ಲಿ 198 ಗಣೇಶ್‌ ಮೂರ್ತಿಗಳು ಮೂರನೇ ದಿನದ ವಿಸರ್ಜನೆಗೊಂಡವು. ಆದರೆ ಬುಧವಾರ ಸಂಜೆಯಿಂದ ರಾತ್ರಿಯವರೆಗೂ ಕೆಲವು ಗಣೇಶ ಮೂರ್ತಿ ನಗರದ ಮುಖ್ಯ ರಸ್ತೆಯ ಮೂಲಕ ಕೆಲವು ಗಣೇಶ ಮೂರ್ತಿ ವಿಸರ್ಜನೆಗೆ ತೆರಳುತ್ತಿದದ್ದು ಕಂಡು ಬಂತು.

ಬುಧವಾರ ಸುಮಾರು 198 ಗಣೇಶ ಮೂರ್ತಿ ವಿಸರ್ಜಿಸಲು ಸಿದ್ದರಾಗಿದ್ದು, ಹೊಸಪೇಟೆ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 57 ಗಣೇಶ, ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 74 ಗಣೇಶ, ಚಿತ್ತವಾಡ್ಗಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 28, ಬಡಾವಣೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 26, ಟಿಬಿ ಡ್ಯಾಂ ಪೊಲೀಸ್‌ ಠಾಣೆಯ 13 ಗಣೇಶ ಮೂರ್ತಿಗಳು ಸೇರಿದಂತೆ ಒಟ್ಟು 198 ಗಣೇಶ ಮೂರ್ತಿ ಬುಧವಾರ ವಿಸರ್ಜನೆಗೆ ತೆರಳಿದವು.

ವಿಶ್ವವಿಖ್ಯಾತ ಹಂಪಿಯಲ್ಲಿ 4 ಗಣೇಶ ಮೂರ್ತಿ, ಕಮಲಾಪುರದಲ್ಲಿ 25, ಮರಿಯಮ್ಮನಹಳ್ಳಿಯಲ್ಲಿ 12 ಸೇರಿದಂತೆ ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 76 ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.

ಗಣೇಶ ವಿಸರ್ಜನೆಯಲ್ಲಿ ಯುವಕರ ದಂಡು ಪಟಾಕಿ ಸಿಡಿಸಿ, ಡ್ರಮ್ ಸೆಟ್‌ಗಳಿಗೆ ಹಾಗೂ ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಂಭ್ರಮದಿಂದ ನೃತ್ಯ ಮಾಡುತ್ತಾ ನಗರದ ಮುಖ್ಯ ರಸ್ತೆಯ ದೊಡ್ಡ ಮಸೀದಿ ರಸ್ತೆಯ ಮೂಲಕ ಹಾದು ಹೋಗುತ್ತಿದ್ದವು. ಅನೇಕ ಗಣೇಶ ಮೂರ್ತಿ ಮುಖ್ಯರಸ್ತೆಯಾಗಿರುವ ನಗರದ ದೊಡ್ಡ ಮಸೀದಿ ರಸ್ತೆಯಲ್ಲೇ ಹಾದು ಹೋಗುತ್ತಿರುವುದರಿಂದ ಒಂದೇ ವೃತ್ತದಲ್ಲಿ ಮಸೀದಿ, ಚರ್ಚ್‌ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ಇರುವುದರಿಂದ ಈ ವೃತ್ತದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು. ಇನ್ನುಳಿದ 674 ಗಣೇಶಗಳು ಐದನಕ್ಕೆ ವಿಸರ್ಜನೆಗೆ ತೆರಳಲಿವೆ.

ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಸೇರಿದಂತೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ, ಕಮಲಾಪುರ, ಗಾದಿಗನೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಿತು.