ಜೆಜಿ ಹಳ್ಳಿ ಬಳಿ ₹1.44 ಕೋಟಿ ಹಣ ಜಪ್ತಿ

| Published : Mar 24 2024, 01:38 AM IST

ಸಾರಾಂಶ

ಎಟಿಎಂಗಳಿಗೆ ಹಣ ತುಂಬುವ ವಾಹನ ಶಿರಾ ಗಡಿ ದಾಟಿ ಅನುಮತಿಯಿಲ್ಲದೆ ಹಿರಿಯೂರು ಪ್ರವೇಶ ಮಾಡಿದ್ದರಿಂದಾಗಿ ತಹಶೀಲ್ದಾರ್ ರಾಜೇಶ್ ಕುಮಾರ್ ನೇತೃತ್ವದಲ್ಲಿ ಹಣ ಮತ್ತು ವಾಹನ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜವನಗೊಂಡನಹಳ್ಳಿ ಗಡಿ ಬಳಿ ಪರಿಶೀಲನೆ ನಡೆಸುವ ವೇಳೆ ಅನಧಿಕೃತವಾಗಿ 1.44 ಕೋಟಿ ರು. ಸಾಗಾಟ ಮಾಡುತ್ತಿದ್ದ ಸಿಎಂಎಸ್ ಕಂಪನಿಯ ವಾಹನ ದೊರಕಿದೆ. ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್, ಗ್ರಾಮಾoತರ ಪೊಲೀಸ್ ಠಾಣೆ ಸಿಪಿಐ ಹಾಗೂ ಸಂಚಾರಿ ಜಾರಿ ದಳದ ಅಧಿಕಾರಿಗಳು ಹಣ ಜಪ್ತಿ ಮಾಡಿ ವಾಹನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಎಟಿಎಂ‌ಗಳ ಹಣ ನಿರ್ವಹಣೆ ಮಾಡುವ ಸಿಎಂಎಸ್ ಕಂಪನಿಯು ತುಮಕೂರಿನಿಂದ ಶಿರಾ ತಾಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ ಶಿರಾ ತಾಲೂಕು ದಾಟಿ ಹಿರಿಯೂರು ತಾಲೂಕಿನ ಗಡಿ ಪ್ರವೇಶಿಸಿದೆ. ಈ ಕುರಿತು ವಿಚಾರಿಸಿದಾಗ ಹಿರಿಯೂರು ಗಡಿ ಪ್ರವೇಶಿಸಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಹಾಜರು ಪಡಿಸಿಲ್ಲ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಚಿತ್ರದುರ್ಗ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ರೂ.1.44 ಕೋಟಿ ಹಣ ಹಾಗೂ ವಾಹನ ಜಪ್ತಿ ಮಾಡಿ ವಶಪಡಿಸಿಕೊಂಡು

ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ವಶಪಡಿಸಿಕೊಂಡ ಹಣವನ್ನು ಸೂಕ್ತ ವಿಚಾರಣೆಯ ಬಳಿಕ ಜಿಲ್ಲಾ ಪಂಚಾಯ್ತಿ ಸಿಇಒ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು.

ತುರುವನೂರು ಚೆಕ್‌ಪೋಸ್ಟ್‌ ಬಳಿಯೂ ₹1.50 ಲಕ್ಷ ವಶ

ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.1.50 ಲಕ್ಷ ಹಣವನ್ನು ತುರುವನೂರು ಹೋಬಳಿ ಚೆಕ್‌ಪೋಸ್ಟ್‌ನಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ.ಎಫ್‌ಎಸ್‌ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ ಕುಮಾರ್ ಅವರು ತುರುವನೂರು ಹೋಬಳಿ ಚೆಕ್‌ಪೋಸ್ಟ್‌ನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಕೊಪ್ಪಳದ ಇರ್ಪಾನ್ ಶೇಕ್ ಬಿನ್ ದಾದಾಪೀರ್ ಎಂಬುವರು ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹1.50 ಲಕ್ಷ ಹಣವನ್ನು ಎಫ್‌ಎಸ್‌ಟಿ ತಂಡ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದೆ.

ಜಪ್ತಿ ಪಡಿಸಿಕೊಂಡ ಹಣವನ್ನು ನಗದು ವಶಪಡಿಸಿಕೊಳ್ಳುವ ಪರಿಹಾರ ಸಮಿತಿ ಗಮನಕ್ಕೆ ತಂದಿದ್ದು, ಈ ಹಣವನ್ನು ಚಳ್ಳಕೆರೆಯ ಉಪ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ.