ಸಾರಾಂಶ
ಹಿರೇಹರಕುಣಿ ಗ್ರಾಪಂನಲ್ಲಿ ಸದ್ಯದ ಆಡಳಿತ ಮಂಡಳಿ ₹1 ಕೋಟಿ 5 ಲಕ್ಷ ಅವ್ಯವಹಾರ ಮಾಡಿದೆ ಬಸವಂತಪ್ಪ ಹೊಸಮನಿ ಆರೋಪಿಸಿದರು.
ಕುಂದಗೋಳ: ತಾಲೂಕಿನ ಹಿರೇಹರಕುಣಿ ಗ್ರಾಪಂನಲ್ಲಿ ಸದ್ಯದ ಆಡಳಿತ ಮಂಡಳಿ ₹1 ಕೋಟಿ 5 ಲಕ್ಷ ಅವ್ಯವಹಾರ ಮಾಡಿದೆ. ಪಾರದರ್ಶಕವಾಗಿ ತನಿಖೆ ಮಾಡಲಿ, ಇದೇನಾದರೂ ಸುಳ್ಳಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ಹಿರೇಹರಕುಣಿ ಗ್ರಾಮದ ಬಸವಂತಪ್ಪ ಹೊಸಮನಿ ಆರೋಪಿಸಿದರು.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿರೇಹರಕುಣಿ ಗ್ರಾಮದ ಪ್ರಸ್ತುತ ಆಡಳಿತ ಮಂಡಳಿ ನರೇಗಾ ಕಾಮಗಾರಿ, ಕೃಷಿ ಹೊಂಡ, ಸರ್ಕಾರಿ ಪ್ರಾಥಮಿಕ ಶಾಲಾ ಕಾಂಪೌಂಡ್ ಕೆಲಸ ಹೀಗೆ ವಿವಿಧ ಕಾಮಗಾರಿಯಲ್ಲಿ ಕೆಲಸ ಇಲ್ಲದೆ ಹಾಗೆಯೇ ಬಿಲ್ ತೆಗೆದಿದ್ದಾರೆ. ಇದರಂತೆ ನರೇಗಾ ಕಾಮಗಾರಿಯಲ್ಲಿ ಕಾಲುವೆ ಹೂಳೆತ್ತಲು ₹8.5 ಲಕ್ಷ, ಕಸ ನೈರ್ಮಲ್ಯ ಗುಂಡಿ ತೆಗೆಯಲು ₹1.8 ಲಕ್ಷ, 14ನೇ ಹಣಕಾಸಿನಲ್ಲಿ ಎಸ್ ಸಿ, ಎಸ್ ಟಿ ಅನುದಾನದಲ್ಲಿ ₹8.5 ಲಕ್ಷ ಹಾಗೂ ಪಂಚಾಯಿತಿ ಮೇಲೆ ಸೋಲಾರ್ ಅಳವಡಿಸಲು ₹7.5 ಲಕ್ಷ ಹೀಗೆ ಅನೇಕ ಕಾಮಗಾರಿಯಲ್ಲಿ ಒಟ್ಟು ₹1 ಕೋಟಿ 5 ಲಕ್ಷ ಹೆಚ್ಚು ಬಿಲ್ ತೆಗೆದಿದ್ದಾರೆ. ಇವು ಯಾವ ಕೆಲಸ ಸಹ ಆಗಿಲ್ಲ. ಇವುಗಳ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಪ್ರದರ್ಶಿಸಿದರು.ಸತ್ತವರ ಹೆಸರಿನಲ್ಲಿ ಸಹ ಬಿಲ್ ಪಾವತಿಸಿ ಹಣ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಸಂಬಂಧಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿಗಳಿಗೆ, ಜಿಪಂ ಸಿಇಒ, ಕುಂದಗೋಳ ತಾಪಂ ಇಒ ಹಾಗೂ ಸಂಬಂಧಿಸಿದ ಲೋಕಾಯುಕ್ತ ಇಲಾಖೆಯ ಎಲ್ಲರಿಗೂ ಮನವಿ ಸಲ್ಲಿಸಿ 3 ತಿಂಗಳಾಗಿದೆ. ಈ ವರೆಗೂ ಯಾವುದೇ ರೀತಿಯ ಉತ್ತರ ದೊರಕಿಲ್ಲ ಎಂದರು.
ಸಂಬಂಧಿಸಿದ ಅಧಿಕಾರಿಗಳು ಇನ್ನೊಂದು ವಾರದೊಳಗೆ ಪರಿಶೀಲಿಸಿ ನ್ಯಾಯ ಕೊಡದಿದ್ದರೆ ತಹಸೀಲ್ದಾರ್ ಕಚೇರಿ ಎದುರಿಗೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆ ನೀಡಿದರು.