ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪುಇಲ್ಲಿನ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್‌ನ ಸಿಎಸ್‌ಆರ್ ಯೋಜನೆಯಡಿ ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನಕ್ಕೆ ೨೫ ಲಕ್ಷ ರು.ಗಳ ದೇಣಿಗೆ ನೀಡಲಾಯಿತು.ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ್ ಆಳ್ವರಿಗೆ ಈ ದೇಣಿಗೆ ಹಸ್ತಾಂತರಿಸಿದರು.ಈ ಸಂದರ್ಭ ಮಾತನಾಡಿದ ಡಾ.ಮೋಹನ್ ಆಳ್ವ, ಕರಾವಳಿ ಭಾಗದಲ್ಲಿ ಇಲ್ಲಿಯ ತನಕ ಯಾವುದೇ ಖಾಸಗಿ ಸಂಸ್ಥೆಯವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅನುದಾನ ನೀಡಿರುವುದಿಲ್ಲ. ಆದರೆ ಇಂದು ಅದಾನಿ ಸಮೂಹವು ತನ್ನ ಸಿಎಸ್‌ಆರ್ ಯೋಜನೆಯಡಿ ಅನುದಾನ ನೀಡಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಕಿಶೋರ್ ಆಳ್ವ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯುವಪೀಳಿಗೆಗೆ ಒಂದು ಮಾದರಿ ಸಂಸ್ಥೆಯಾಗಿದ್ದು, ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಒಂದು ಶಕ್ತಿ ಮತ್ತು ಪ್ರೇರಣೆಯಾಗಿದೆ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಲು ಅದಾನಿ ಸಮೂಹವು ಸಂತಸಪಡುತ್ತದೆ. ಈ ಹಿಂದೆ ಉಡುಪಿಯಲ್ಲಿ ಸ್ಕೌಟ್ಸ್ - ಗೈಡ್ಸ್ ತರಬೇತಿ ಕೇಂದ್ರಕ್ಕೆ ೮೦ ಲಕ್ಷ ರು., ಮೂಡುಬಿದ್ರಿಯಲ್ಲಿ ಸಭಾಭವನಕ್ಕೆ ೩೮ ಲಕ್ಷ ರು. ಸೇರಿ ಒಟ್ಟು ೧.೫೦ ಕೋಟಿ ರು. ಅನುದಾನವನ್ನು ಇಲ್ಲಿಯ ತನಕ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನಾಧಿಕಾರಿಯಾದ ಪ್ರದೀಪ್, ಜಿಲ್ಲಾ ಸ್ಕೌಟ್ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಅದಾನಿ ಸಮೂಹದ ಏಜಿಎಂ ರವಿ ಜೇರೆ ಉಪಸ್ಥಿತರಿದ್ದರು.