ಮಕ್ಕಳನ್ನು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿಸಲು ಹನುಮಸಾಗರದಲ್ಲಿ ಸುಮಾರು ₹1.55 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ
ಕುಷ್ಟಗಿ: ಜಂಪ್ ರೋಪ್ ಹಾಗೂ ಇತರೆ ಒಳಾಂಗಣ ಕ್ರೀಡೆಗಳಲ್ಲಿ ಮಕ್ಕಳು ಅಂತಾರಾಷ್ಟ್ರೀಯ ಸಾಧನೆಗೆ ನೆರವಾಗಲು ಜಂಪ್ ರೋಪ ಅಸೋಸಿಯೇಷನ್ ಆಫ್ ಕರ್ನಾಟಕ ₹1.55 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಿದೆ ಎಂದು ಭಾರತೀಯ ಪೆಂಕಾಕ್ ಸಿಲಾಟ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೇಲರ್ ಹೇಳಿದರು.
ಪಟ್ಟಣದ ಎಸ್ ವಿ ಮೆಮೊರಿಯಲ್ ಪಬ್ಲಿಕ್ ಶಾಲೆಯ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜಂಪ್ ರೋಪ್ ಕ್ರೀಡಾ ಸ್ಪರ್ಧೆಯಲ್ಲಿ ಈ ಭಾಗದ ಮಕ್ಕಳು ಅಂತಾರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಇತರೆ ಒಳಾಂಗಣ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕ ಗೆದ್ದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಮಕ್ಕಳನ್ನು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿಸಲು ಹನುಮಸಾಗರದಲ್ಲಿ ಸುಮಾರು ₹1.55 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದಕ್ಕೆ ಶಾಸಕರು, ಮಾಜಿ ಸಚಿವರು ಹಾಗೂ ಇತರೆ ದಾನಿಗಳು ಸಹಾಯ ಮಾಡಿದ್ದಾರೆ ಎಂದರು.ಈಗಾಗಲೇ ದೇಶದ ವಿವಿಧ ರಾಜ್ಯಗಳ 30 ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸುಮಾರು 200 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡುವ ಸೌಲಭ್ಯ ಈ ಕ್ರೀಡಾಂಗಣದಲ್ಲಿವೆ. ಕೆಲವೊಂದು ಕ್ರೀಡಾ ತರಬೇತಿಗೆ ಮಣಿಪುರ ಹಾಗೂ ಇತರೆ ಭಾಗಗಳಿಂದ ತರಬೇತುದಾರರನ್ನು ನೇಮಕ ಮಾಡಲಾಗಿದೆ. ನಮ್ಮ ಭಾಗದ ಶಾಲಾ ಮಕ್ಕಳಿಗೆ ಕ್ರೀಡೆಗಳಲ್ಲಿ ಉಚಿತ ತರಬೇತಿ ನೀಡಲು ನಮ್ಮ ಸಂಸ್ಥೆ ಸಿದ್ಧವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಗೆ ಸಾಧನೆ ಮಾಡಲು ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿವೆ. ದೊಡ್ಡ ಪ್ರಮಾಣದಲ್ಲಿ ಮೂಲಭೂತ ಸೌಕರ್ಯ ಸೃಷ್ಟಿಯಾಗಿವೆ. ಕ್ರೀಡೆಯಿಂದ ದೈಹಿಕ ಬಲವರ್ಧನೆ ಉಂಟಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕ್ರೀಡೆಯಿಂದ ಶಿಸ್ತು, ಸಮಯ ಪಾಲನೆ, ಮಾನಸಿಕ ಸದೃಢತೆ ಹೆಚ್ಚುತ್ತದೆ. ಆದ್ದರಿಂದ ಓದಿನ ಆಚೆಗೂ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ಯಶಸ್ಸಿನ ಗುಟ್ಟು ಎಂದರು.ಪೆಂಕಾಕ್ ಸಿಲಾಟ್ ತರಬೇತುದಾರ ಟೆಕ್ ಚಾನ್ ಬಾಯಿಚಾ ಮಾತನಾಡಿ, ಜಂಪ್ ರೋಪ್ ಕ್ರೀಡೆಯಲ್ಲಿ ಈ ಭಾಗದ ಮಕ್ಕಳ ಸಾಧನೆ ಮೀರಿಸುವವರು ಸದ್ಯಕ್ಕೆ ದೇಶದಲ್ಲಿ ಯಾರೂ ಇಲ್ಲ. ಸಮರ ಕಲೆ ಬಗ್ಗೆ ಮಕ್ಕಳು ಹಾಗೂ ಪಾಲಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇಂದಿನ ಜಗತ್ತಿನಲ್ಲಿ ಯಾವುದಾದರೂ ಒಂದು ಸಮರ ಕಲೆಯಲ್ಲಿ ಪರಿಣಿತಿ ಪಡೆಯುವುದು ಅಗತ್ಯವಾಗಿದೆ. ಈ ಕಲೆ ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಮಹದೇವ್ ಮದಾಳೆ ಮಾತನಾಡಿ, ನಮ್ಮ ಶಾಲೆಯಲ್ಲಿ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಅವರಿಗೆ ನಮ್ಮ ಕ್ಯಾಂಪಸ್ ಆವರಣದಲ್ಲಿ ಕ್ರೀಡಾ ತರಬೇತಿ ನೀಡುವ ಯೋಜನೆ ಇದೆ. ಶಾಲೆಯ ಮಕ್ಕಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿ ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ ಎಂದು ಹೇಳಿದರು. ಸಂಸ್ಥೆಯ ಹಣಕಾಸು ಅಧಿಕಾರಿ ಅರುಣ್ ಕರ್ಮಾಕರ್, ಶಿಕ್ಷಕ ಸಿಬ್ಬಂದಿ ಮತ್ತು ಪಾಲಕರು ಹಾಜರಿದ್ದರು.