ಸಾರಾಂಶ
ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ₹೧.೫೭ ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಗೌರಿಪುರದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಗಡಿ ಗ್ರಾಪಂ ಕೇಂದ್ರ ಗೌರಿಪುರದ ಹೈಸ್ಕೂಲ್ ಮಕ್ಕಳು ಕೊಠಡಿ ಕೊರತೆ ಸೇರಿ ನಾನಾ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದರು. ಮಕ್ಕಳ ಸ್ಥಿತಿಗತಿ ಕುರಿತು ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಗೌರಿಪುರ ಪ್ರೌಢ ಶಾಲಾ ಕಟ್ಟಡ ನಿರ್ಮಾಣಕ್ಕೆ ₹೧.೫೭ ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಲೆಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಡಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಸ್ಮಾರ್ಟ್ ಕ್ಲಾಸ್ ಕಲ್ಪಿಸಲಾಗುವುದು ಎಂದರು.ಕನಕಗಿರಿಯಿಂದ ಗೌರಿಪುರದವರೆಗೆ ರಸ್ತೆ ಡಾಂಬರೀಕರಣ, ಸಮುದಾಯ ಭವನ ನಿರ್ಮಾಣಕ್ಕೆ ₹೫೦ ಲಕ್ಷ, ದ್ಯಾಮಲಾಂಬಿಕಾ ದೇವಸ್ಥಾನ ನಿರ್ಮಾಣಕ್ಕೆ ಆರಾಧನಾ ಯೋಜನೆಯಡಿ ₹೧೦ ಲಕ್ಷ ಅನುದಾನ ಹಾಗೂ ಹೆಚ್ಚುವರಿ ಬಸ್ ಬಿಡುವುದಾಗಿ ತಿಳಿಸಿದರು.
ವನ್ಯಜೀವಿ ಉಪಟಳಕ್ಕೆ ಕಡಿವಾಣ ಹಾಕಿ: ಕ್ಷೇತ್ರ ಗಡಿ ಗ್ರಾಮವಾದ ದೇವಲಾಪುರದ ಗುಡ್ಡದಲ್ಲಿ ಕರಡಿ, ಚಿರತೆಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ತೊಂದರೆಯಾಗಿದೆ. ಇಲ್ಲಿಯ ದನಕರು ಚಿರತೆಗಳ ಪಾಲಾಗುತ್ತಿವೆ. ವನ್ಯಜೀವಿಗಳ ಹಾವಳಿಗೆ ತಡೆಯಬೇಕು. ಗ್ರಾಮದಲ್ಲಿ ಸಿಸಿ ರಸ್ತೆ, ಕುಡಿಯುವ ನೀರು ಹಾಗೂ ಆಂಜನೇಯ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.ಬೈಲಕ್ಕಂಪುರದಲ್ಲಿ ಹಳೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳ ಅವಡಿಸುವುದು, ಚಿಕ್ಕವಡ್ರಕಲ್ ಗ್ರಾಮದಲ್ಲಿ ಸೋಲಾರ್ ಲೈಟ್ ಅಳವಡಿಸುವುದು, ಚಿಕ್ಕತಾಂಡಾವನ್ನು ಕಂದಾಯ ಗ್ರಾಮವಾಗಿ ಮಾಡುವುದು, ಜಿನುಗು ಕೆರೆ ನಿರ್ಮಾಣ, ಸಿಸಿರಸ್ತೆ ಹಾಗೂ ತಾಂಡಾ ನಿವಾಸಿಗಳ ಹೊಲಗಳು ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಬರುತ್ತಿದೆ. ನಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಂಗಾಕಲ್ಯಾಣ ಯೋಜನೆ ಕಲ್ಪಿಸಬೇಕು ಎಂದು ಸಚಿವ ತಂಗಡಗಿಗೆ ರೈತರು ಮನವಿ ಮಾಡಿದರು.
ಫ್ರೀ ಬಸ್ ಬ್ಯಾಡ, ಗ್ಯಾಸ್ ಕೊಡಿ: " ಯಪ್ಪಾ... ನಮಗೆ ಬಸ್ ಫ್ರೀ ಬ್ಯಾಡ, ಗ್ಯಾಸ್ ಕೊಡ್ರಿ. ಫ್ರೀ ಬಸ್ ನಮಗ ಉಪಯೋಗ ಇಲ್ಲ. ಫ್ರೀ ಗ್ಯಾಸ್ ಕೊಟ್ರ ಮನೆ ಮಂದಿಯಲ್ಲ ನಿಮ್ಮನ್ನ ನೆನೆಸಗಂತ ಊಟ ಮಾಡ್ತಾರ " ಎಂದು ತಾಲೂಕಿನ ಚಿಕ್ಕವಡ್ಡಕಲ್ ಗ್ರಾಮದ ವಯೋವೃದ್ಧೆಯೊಬ್ಬರು ಸಚಿವ ತಂಗಡಗಿಗೆ ಏರುಧ್ವನಿಯಲ್ಲಿ ಮನವಿ ಮಾಡಿದರು.ಈ ದೂರು ಆಲಿಸಿದ ಸಚಿವ ಶಿವರಾಜ ತಂಗಡಗಿ ವೃದ್ಧೆಗೆ, ಆಯ್ತು ಅದಕ್ಕೊಂದು ವ್ಯವಸ್ಥೆ ಮಾಡೋಣ ಎಂದು ಸಹನೆಯಿಂದ ಉತ್ತರಿಸಿ ಸಮಾಧಾನಪಡಿಸಿದರು.
ತಹಶೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ಚಂದ್ರಶೇಖರ ಕೆ., ಎಇಇ ವಿಜಯಕುಮಾರ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಜೆಸ್ಕಾಂ ಅಧಿಕಾರಿ ಆನಂದ, ಪಿಡಿಒ ನಾಗಲಿಂಗಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ಪಪಂ ಸದಸ್ಯರು ಇತರರು ಇದ್ದರು.ವಾರದೊಳಗೆ ರಥಭೀದಿ ಭೂಮಿಪೂಜೆ: ಕನಕಗಿರಿ ರಥಭೀದಿಯ ಅಭಿವೃದ್ಧಿಗೆ ವಾರದೊಳಗಾಗಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಅವರು ಬುಧವಾರ ಚಿಕ್ಕತಾಂಡಾ ಗ್ರಾಮದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಕನಕಗಿರಿ ರಥಬೀದಿ ಅಭಿವೃದ್ಧಿ ಬಹು ವರ್ಷಗಳ ಬೇಡಿಕೆಯಾಗಿದ್ದು, ಜನರ ಆಶಯದಂತೆ ₹೨ ಕೋಟಿ ವೆಚ್ಚದಲ್ಲಿ ವ್ಯವಸ್ಥಿತ ಕಾಮಗಾರಿ ನಡೆಸಲು ವಾರದೊಳಗೆ ಚಾಲನೆ ನೀಡಲಾಗುವುದು. ಇನ್ನು ಜಾತ್ರೆ ಏಪ್ರೀಲ್ ತಿಂಗಳಲ್ಲಿದ್ದು, ಕಾಮಗಾರಿ ನಡೆಸಲು ಕಾಲಾವಕಾಶವಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದರು.ಅಧಿಕಾರಿಗಳು ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಸ್ಪಂದಿಸುವಂತಾಗಬೇಕು. ಅಲೆದಾಡಿಸುವುದು, ಕಾಡಿಸುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಈ ವೇಳೆ ಪಪಂ ಸದಸ್ಯರಾದ ಸಂಗಪ್ಪ ಸಜ್ಜನ, ರಾಜಸಾಬ ನಂದಾಪುರ, ಶರಣೇಗೌಡ, ಅನಿಲ ಬಿಜ್ಜಳ, ಕಂಠಿರಂಗಪ್ಪ ನಾಯಕ, ಪ್ರಮುಖರಾದ ಹೊನ್ನೂರುಸಾಬ ಉಪ್ಪು, ಟಿ.ಜೆ. ರಾಮಚಂದ್ರ, ಹುಲುಗಪ್ಪ ವಾಲೇಕಾರ್, ವಿರೂಪಾಕ್ಷ ಆಂಧ್ರ ಸೇರಿದಂತೆ ಚಿಕ್ಕತಾಂಡಾ ಗ್ರಾಪಂ ಸದಸ್ಯರು ಇದ್ದರು.