ಶಿವಮೊಗ್ಗ ದಸರಾಗೆ ₹1.75 ಕೋಟಿ ಖರ್ಚು
KannadaprabhaNewsNetwork | Published : Oct 28 2023, 01:15 AM IST
ಶಿವಮೊಗ್ಗ ದಸರಾಗೆ ₹1.75 ಕೋಟಿ ಖರ್ಚು
ಸಾರಾಂಶ
ಕಳೆದ ಬಾರಿ ಸರ್ಕಾರ ₹1 ಕೋಟಿ ಅನುದಾನ ನೀಡಿತ್ತು. ಆದರೆ, ಈ ಬಾರಿ ₹20 ಲಕ್ಷ ಅನುದಾನ ಮಾತ್ರ ನೀಡಿದೆ.
ಶಿವಮೊಗ್ಗ: ಈ ಬಾರಿಯೂ ಶಿವಮೊಗ್ಗ ದಸರಾ ಅದ್ಧೂರಿಯಾಗಿ ಆಚರಿಸಲಾಗಿದೆ. ಕಳೆದ ಬಾರಿ ಸರ್ಕಾರ ₹1 ಕೋಟಿ ಅನುದಾನ ನೀಡಿತ್ತು. ಆದರೆ, ಈ ಬಾರಿ ₹20 ಲಕ್ಷ ಅನುದಾನ ಮಾತ್ರ ನೀಡಿದೆ. ಈಗ ₹1 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಬಾರಿ ದಸರಾಗೆ ₹1.65 ಕೋಟಿ ಖರ್ಚಾಗಿದೆ. ಸರ್ಕಾರ ₹1 ಕೋಟಿ ಹಣ ಕೊಟ್ಟಿತ್ತು. ಉಳಿದ ಹಣವನ್ನು ಪಾಲಿಕೆಯಿಂದ ಭರಿಸಲಾಗಿತ್ತು. ಈ ಬಾರಿಯ ದಸರಾಕ್ಕೆ ₹1.75 ಕೋಟಿ ಖರ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ಪಾಲಿಕೆಯಿಂದ ಆಯೋಜಿಸಿದ್ದ ದಸರಾ ಮಹೋತ್ಸವ ಯಶಸ್ಸು ಕಂಡಿದೆ. ವಿವಿಧ ಸಮಿತಿಗಳ ಮೂಲಕ 10 ದಿನಗಳ ಕಾಲವೂ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರಲ್ಲದೆ ರಾಜ್ಯದ ವಿವಿಧೆಡೆಯ ಕಲಾವಿದರು ಭಾಗವಹಿಸಿದ್ದರು. ಶಾಸಕರು, ಸಂಸದರು, ಜನಪ್ರತಿನಿಧಿಗಳು ಅತ್ಯಂತ ಸಹಕಾರ ನೀಡಿದರು ಎಂದು ಸ್ಮರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್, ಸದಸ್ಯರಾದ ಇ.ವಿಶ್ವಾಸ್, ರೇಖಾ ರಂಗನಾಥ್, ಅನಿತಾ ರವಿಶಂಕರ್, ಆಶಾ ಚಂದ್ರಪ್ಪ, ಆರತಿ ಆ.ಮಾ.ಪ್ರಕಾಶ್, ವಿಶ್ವನಾಥ್ ಉಪಸ್ಥಿತರಿದ್ದರು. - - - ಬಾಕ್ಸ್ ಮರಿಯಾನೆಗೆ ಚಾಮುಂಡಿ ಎಂಬ ಹೆಸರು ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೇತ್ರಾವತಿ ಆನೆ ವಿಜಯದಶಮಿ ಹಿಂದಿನ ದಿನವೇ ಮರಿ ಹಾಕಿದೆ. ಈ ಬಗ್ಗೆ ಒಂದಿಷ್ಟು ಗೊಂದಲಗಳು ಇರುವುದು ನಿಜ. ಗರ್ಭಿಣಿ ಆನೆಯನ್ನು ದಸರಾ ಮೆರವಣಿಗೆಗೆ ಹೇಗೆ ಕರೆದುಕೊಂಡು ಬಂದರು ಎಂಬ ಪ್ರಶ್ನೆಗೆ ಸಕ್ರೆಬೈಲು ಆನೆ ಬಿಡಾರದ ಅಧಿಕಾರಿಗಳು ಉತ್ತರಿಸಬೇಕಿದೆ. ವಿಜಯದಶಮಿ ಹಿಂದಿನ ದಿನ ಹುಟ್ಟಿದ ಈ ಮರಿಯಾನೆಗೆ ಚಾಮುಂಡಿ ಎಂದು ಹೆಸರಿಡಲು ಪಾಲಿಕೆಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. - - - -27ಎಸ್‌ಎಂಜಿಕೆಪಿ04: ಎಸ್.ಶಿವಕುಮಾರ್