ಸಾರಾಂಶ
ಶಿಡ್ಲಘಟ್ಟ: 2022- 23ನೇ ಸಾಲಿನಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಮಾರು 1.75 ಕೋಟಿ ನಷ್ಟದಲ್ಲಿತ್ತು. ಅದರೆ 2023- 24ನೇ ಸಾಲಿನಲ್ಲಿ ಸುಮಾರು 1.85 ಕೋಟಿ ರು.ಗಳ ಲಾಭದಾಯಕದಲ್ಲಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಿ.ಸಿ ರಾಮಚಂದ್ರ ಹೇಳಿದರು.
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ 2023- 24ನೇ ಸಾಲಿನ 86ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಮತ್ತು ನೂತನ ಅಂಗಡಿ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಿಬ್ಬಂದಿ ಹಾಗೂ ನಿರ್ದೇಶಕರ ಸಹಕಾರದಿಂದ ಸಾಲವನ್ನು ಕಳಚಿ ಇಂದು ನಾವು ಲಾಭದಾಯಕದಲ್ಲಿದ್ದೇವೆ. ಅದೇ ರೀತಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿರುವ ಪಿಕಾರ್ಡ್ ಬ್ಯಾಂಕುಗಳ ಪೈಕಿ ಶಿಡ್ಲಘಟ್ಟ ಬ್ಯಾಂಕ್ ಎರಡನೇ ಸ್ಥಾನವನ್ನು ಪಡೆದಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
2023- 24ನೇ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿರುವ ಪಿಕಾರ್ಡ ಬ್ಯಾಂಕುಗಳಿಗೆ ಪ್ರಶಂಸಾ ಫಲಕವನ್ನು ಸೆಪ್ಟೆಂಬರ್ 23ರಂದು ಕೇಂದ್ರದ ಬ್ಯಾಂಕಿನಲ್ಲಿ ನಡೆಯುವ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ವಿತರಿಸಲಾಗುತ್ತಿದೆ, ತಾಲೂಕು ಕೇಂದ್ರ ಬ್ಯಾಂಕಿನಲ್ಲಿ ಸೆಪ್ಟೆಂಬರ್ 25 ರಂದು ನಡೆಯುವ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಎಲ್ಲಾ ರೈತರು ಕಡ್ಡಾಯವಾಗಿ ಹಾಜರಾಗಬೇಕು ಎಂದರು.ರೈತರು ಗೊಂದಲಕ್ಕೊಳಗಾಗಬೇಡಿ, ಸರ್ಕಾರದ ಸುತ್ತೋಲೆ ಪ್ರಕಾರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆಗೆ ಪ್ರತಿಯೊಬ್ಬ ರೈತನೂ ಕನಿಷ್ಠ ಎರಡು ಮಹಾಸಭೆಗಳಿಗೆ ಹಾಜರಾಗಿ ಎರಡು ಬಾರಿ ಬ್ಯಾಂಕಿನಲ್ಲಿ ವ್ಯವಹಾರ ನಡೆಸಿರಬೇಕು. ರೈತರು ಯಾವುದೇ ರೀತಿಯಲ್ಲೂ ಗೊಂದಲಕ್ಕೆ ಒಳಗಾಗಬಾರದೆಂದು ಬ್ಯಾಂಕಿನ ಮೂಲಕ ರೈತರಿಗೆ ತಿಳುವಳಿಕೆ ಪತ್ರವನ್ನು ಸಹ ಕಳುಹಿಸಿಕೊಟ್ಟಿರುತ್ತೇವೆ ಎಂದು ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಕೆ.ಎಂ ಭೀಮೇಶ್ ತಿಳಿಸಿದರು.
ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕ ಬಂಕ್ ಮುನಿಯಪ್ಪ, ಎಂ.ಪಿ ರವಿ, ಮುರಳಿ ಎಂ, ಮಂಜುನಾಥ್ ಎ ಎಸ್, ನಾರಾಯಣಸ್ವಾಮಿ ಸಿ, ನಿವೃತ್ತ ವ್ಯವಸ್ಥಾಪಕ ಸಿ.ಎನ್ ಕೃಷ್ಣನ್, ಬ್ಯಾಂಕಿನ ಸಿಬ್ಬಂದಿ ಮತ್ತಿತರರು ಇದ್ದರು.