ಮೆಳವಂಕಿ ಸರ್ಕಾರಿ ಶಾಲೆಗೆ 1 ಕೋಟಿ ನೆರವು

| Published : May 13 2025, 01:26 AM IST

ಸಾರಾಂಶ

ಮೆಳವಂಕಿ ಸರ್ಕಾರಿ ಶಾಲೆಯು ಪ್ರಸಕ್ತ ಸಾಲಿನಲ್ಲಿ 980 ಮಕ್ಕಳ ದಾಖಲಾತಿಯೊಂದಿಗೆ ಅತ್ಯುತ್ತಮ ಶಾಲೆಯಾಗಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮೂಡಲಗಿ

ಮೆಳವಂಕಿಯ ಸಿದ್ಧಾರೂಢ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಬೆಳವಣಿಗೆ ಪರಿಗಣಿಸಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬೆಂಗಳೂರಿನ ಓಸಾಟ್ ಸಂಸ್ಥೆಯಿಂದ ₹1 ಕೋಟಿ ಆರ್ಥಿಕ ಸಹಾಯ ನೀಡಲಾಗಿದೆ ಎಂದು ಓಸಾಟ್‌ ಸಂಸ್ಥೆ ರಾಮಮೂರ್ತಿ ಹೇಳಿದರು.

ಮೂಡಲಗಿ ಶೈಕ್ಷಣಿಕ ವಲಯದ ಮೆಳವಂಕಿಯ ಸಿದ್ಧಾರೂಢಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತ 4 ಕೊಠಡಿಗಳ ನಿರ್ಮಾಣಕ್ಕೆ ಓಸಾಟ್ ಸಂಸ್ಥೆಯಿಂದ ನೀಡಲಾದ ₹1 ಕೋಟಿ ಆರ್ಥಿಕ ಸಹಾಯದಲ್ಲಿ ನಿರ್ಮಿಸುತ್ತಿರುವ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೆಳವಂಕಿ ಸರ್ಕಾರಿ ಶಾಲೆಯು ಪ್ರಸಕ್ತ ಸಾಲಿನಲ್ಲಿ 980 ಮಕ್ಕಳ ದಾಖಲಾತಿಯೊಂದಿಗೆ ಅತ್ಯುತ್ತಮ ಶಾಲೆಯಾಗಿರುವುದು ಶ್ಲಾಘನೀಯ. ಶಾಲೆ ಶೈಕ್ಷಣಿಕ ಪ್ರಗತಿ ಮೆಚ್ಚಿಕೊಂಡಿರುವ ಅಮೆರಿಕಾದ ಕೀರ್ತಿ ಮೇಲುಕೋಟೆ ಮತ್ತು ಸ್ನೇಹಾ ದಂಪತಿ ಓಸಾಟ್ ಸಂಸ್ಥೆಯ ಮೂಲಕ ₹1 ಕೋಟಿ ದೇಣಿಗೆ ನೀಡಿರುವರು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿ, ಓಸಾಟ್ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಉತ್ತಮ ಸರ್ಕಾರಿ ಶಾಲೆ ಗುರುತಿಸಿ ಆರ್ಥಿಕ ಸಹಾ ನೀಡುತ್ತಿರುವುದು ಶ್ಲಾಘನೀಯ ಎಂದರು.

ಶಾಲೆ ಮುಖ್ಯಶಿಕ್ಷಕ ಈರಣ್ಣ ಕಡಕೋಳ ಮಾತನಾಡಿ, ಶಾಲೆ ಶೈಕ್ಷಣಿಕ ಪ್ರಗತಿಯಲ್ಲಿ ಗ್ರಾಮದ ಹಿರಿಯರು, ಶಿಕ್ಷಕರ ಸಹಕಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರ ಮಾರ್ಗದರ್ಶನವು ಮುಖ್ಯವಾಗಿದೆ ಎಂದರು. ಅತಿಥಿಯಾಗಿ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಯ ಬಬಲಿ, ಗ್ರಾಮದ ಪ್ರಮುಖರಾದ ಮಹಾದೇವ ವಿ.ಪತ್ತಾರ, ಬಸಗೌಡ ಪಾಟೀಲ, ಸಿದ್ದಪ್ಪ ಹಂಜಿ ಹಾಗೂ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.