1 ಕೋಟಿ ರು. ವೆಚ್ಚದಲ್ಲಿ ಕಲಾಮಂದಿರ ನವೀಕರಣ: ಸಚಿವ ಚಲುವರಾಯಸ್ವಾಮಿ

| Published : Dec 19 2024, 12:32 AM IST

1 ಕೋಟಿ ರು. ವೆಚ್ಚದಲ್ಲಿ ಕಲಾಮಂದಿರ ನವೀಕರಣ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನದ ಅಂಗವಾಗಿ ನಾಳೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ಜರುಗಲಿವೆ. ಮುಂದಿನ ದಿನಗಳಲ್ಲೂ ಕಲಾವಿದರು, ಸಂಘಟನೆಗಳ ಸಭೆ, ಸಮಾರಂಭಗಳಿಗೂ ನೆರವಾಗಲಿದೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು 1.08 ಕೋಟಿ ರು ವೆಚ್ಚದಲ್ಲಿ ನವೀಕರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಬುಧವಾರ ನವೀಕರಣಗೊಂಡಿರುವ ನಗರದ ಕಲಾಮಂದಿರ ಉದ್ಘಾಟಿಸಿದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬಹಳ ವರ್ಷಗಳಿಂದ ಕಲಾಮಂದಿರವು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತವಾಗಿರಲಿಲ್ಲ. ಮಳೆ ಬಂದಾಗ ಸೋರಿಕೆ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸರಿ ಇರಲಿಲ್ಲ. ಅಲ್ಲದೇ ಅನೇಕ ಸಮಸ್ಯೆಗಳಿದ್ದವು ಎಂದರು.

ಯಾವುದೇ ಸಭೆ, ಸಮಾರಂಭಗಳಿಗೆ ಆಗಮಿಸುವ ಗಣ್ಯರು, ಸಾರ್ವಜನಿಕರ ಉಪಯೋಗಕ್ಕೆ ಅಡಚಣೆಯಾಗಿತ್ತು. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಮಂದಿರದಲ್ಲಿ ಜರುಗಬೇಕು ಎಂಬ ಉದ್ದೇಶ ಹಾಗೂ ಕಲಾವಿದರ ಒತ್ತಾಯದ ಮೇರೆಗೆ ನವೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಅಂಗವಾಗಿ ನಾಳೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ಜರುಗಲಿವೆ. ಮುಂದಿನ ದಿನಗಳಲ್ಲೂ ಕಲಾವಿದರು, ಸಂಘಟನೆಗಳ ಸಭೆ, ಸಮಾರಂಭಗಳಿಗೂ ನೆರವಾಗಲಿದೆ ಎಂದು ಹೇಳಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಬಹಳ ವರ್ಷಗಳಿಂದ ಕಲಾಮಂದಿರ ಹದಗೆಟ್ಟು ದುರಸ್ಥಿಯಾಗಬೇಕಿತ್ತು. ರಂಗಭೂಮಿ ಕಲಾವಿದರ ಜೀವಾಳವಾದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಲವು ನಾಟಕಗಳನ್ನು ಪ್ರದರ್ಶನ ಮಾಡಲು ಸರ್ಕಾರ ಕಲಾಮಂದಿರವನ್ನು ನವೀಕರಿಸಿದೆ ಎಂದರು.

2 ನೇ ಹಂತದಲ್ಲಿ 25 ಲಕ್ಷ ರು ವೆಚ್ಚದಲ್ಲಿ ಕೂರುವ ಆಸನಗಳಿಗೆ ಸೀಟ್ ಕವರ್ ಹಾಗೂ ಇನ್ನಿತರೆ ವ್ಯವಸ್ಥೆಗೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಕಸಾಪ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕಸಾಪ ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

----------

18ಕೆಎಂಎನ್ ಡಿ15

ಮಂಡ್ಯದಲ್ಲಿ ನವೀಕರಣಗೊಂಡ ಕಲಾಮಂದಿರವನ್ನು ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು.