ಸಾರಾಂಶ
ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಬರ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ಕ್ರಮಕೈಗೊಂಡಿದೆ. ಅಗತ್ಯವಿರುವ ಕಡೆಗಳಲ್ಲಿ 24 ಗಂಟೆಗಳಲ್ಲೇ ನೀರು ಹಾಗೂ ಮೇವು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಬರ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ಕ್ರಮಕೈಗೊಂಡಿದೆ. ಅಗತ್ಯವಿರುವ ಕಡೆಗಳಲ್ಲಿ 24 ಗಂಟೆಗಳಲ್ಲೇ ನೀರು ಹಾಗೂ ಮೇವು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಹಾಗೂ ಮೇವು ಪೂರೈಕೆಗಾಗಿ ಎಲ್ಲ ತಹಸೀಲ್ದಾರ್ ಖಾತೆಗೆ ₹1 ಕೋಟಿ ಅಧಿಕ ಹಣ ಬಿಡುಗಡೆ ಮಾಡಲಾಗಿದೆ ಎಂದರು.ಪ್ರತಿ ದಿನ 621 ಟ್ಯಾಂಕರ್ ಮೂಲಕ ನೀರು:
ಜಿಲ್ಲೆಯ 145 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆವಿದ್ದು, ಕುಡಿಯುವ ನೀರಿನ ಸಮಸ್ಯೆವಿದ್ದ ಕಡೆಗಳಲ್ಲಿ ನೀರಿನ ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ 168 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದ್ದು, ಪ್ರತಿ ದಿನ 621 ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.6 ಮೇವಿನ ಬ್ಯಾಂಕ್:ಜಿಲ್ಲೆಯಲ್ಲಿ ಜಾನುವಾರುಗಳಿಗೆ 6 ಮೇವಿನ ಬ್ಯಾಂಕ್ ತೆರೆಯಲಾಗಿದೆ. ಅಥಣಿಯ ಕಕಮರಿ, ಅನಂತಪುರ, ತೆಲಸಂಗ, ಚಿಕ್ಕೋಡಿ ತಾಲೂಕಿನ ಕಳಕೋಡಗೇಟ್, ಗೋಕಾಕನ ಕಡಬಗಟ್ಟಿಯಲ್ಲಿ, ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ಮೇವು ಬ್ಯಾಂಕ್ ತೆರೆದು ರೈತರಿಗೆ ಮೇವು ಕೊಡುತ್ತಿದ್ದೇವೆ ಎಂದರು. ₹247 ಕೋಟಿ ಬರ ಪರಿಹಾರ ಬಿಡುಗಡೆ:
ಜಿಲ್ಲೆಗೆ ರಾಜ್ಯ ಸರ್ಕಾರ ₹247 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ್ದು, ಜಿಲ್ಲೆಯ 2,68,077 ರೈತರ ಖಾತೆಗೆ ಪರಿಹಾರ ಬಿಡುಗಡೆ ಮಾಡಿದೆ. ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ₹2 ಸಾವಿರದಂತೆ ₹69.52 ಕೋಟಿ ಪರಿಹಾರವನ್ನು ಈಗಾಗಲೇ ಬಿಡುಗಡೆಯಾಗಿದೆ. ಉಳಿದ ಪರಿಹಾರದ ಮೊತ್ತ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಿದ್ದಾರೆ ಎಂದರು. ಬಿತ್ತನೆ ಮಾಡಿದ ರೈತರ ಮಾತ್ರ ಫ್ರೂಟ್ ಐಡಿ ಮೂಲಕ ಪರಿಹಾರ ಜಮಾ ಮಾಡಲಾಗಿದೆ. ಬಿತ್ತನೆ ಮಾಡದ ರೈತರು ಪರಿಹಾರಕ್ಕೆ ಅರ್ಹರಲ್ಲ. ಕೆಲವು ರೈತರು ಬ್ಯಾಂಕ್ ಖಾತೆಗೆ ಆಧಾರ್ ಹಾಗೂ ಎನ್‌ಸಿಪಿಐ ಜೋಡಣೆ ಇಲ್ಲ, ಫ್ರೂಟ್ ಐಡಿ ಇಲ್ಲ, ಇನ್ನೂ ಕೆಲವು ರೈತರ ಬ್ಯಾಂಕ್ ಖಾತೆಗಳು ಸಕ್ರೀಯವಾಗಿಲ್ಲ. ಅಂತವರು ಬ್ಯಾಂಕಗಳಿಗೆ ತೆರಳಿ ವಿಚಾರಿಸಿ ಖಾತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ 184 ಕೆರೆಗಳು ತುಂಬದೇ ಖಾಲಿ ಇವೆ. ಜಿಲ್ಲೆಯಲ್ಲಿ ಶೇ.30 ರಷ್ಟು 85 ಕೆರೆಗಳು ತುಂಬಿವೆ. ತುಂಬಿದ ಕೆರೆಯಲ್ಲಿ ಗೋಕಾಕನ ಒಂದು ಕೆರೆ ಇದೆ. ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯೂ ಒಳ್ಳೆಯ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಲ ಚೆನ್ನಾಗಿ ಮಳೆಯಾಗಲಿ ಎನ್ನುವುದು ಆಶಯ ಎಂದರು.