ಮೀಸಲಾತಿ ಕೊಡಿಸಿದ್ರೆ ಸಚಿವೆಗೆ 1 ಕೆಜಿ ಬಂಗಾರ: ಮಾಜಿ ಸಚಿವ ಮುರುಗೇಶ ನಿರಾಣಿ

| Published : Dec 13 2024, 12:45 AM IST

ಮೀಸಲಾತಿ ಕೊಡಿಸಿದ್ರೆ ಸಚಿವೆಗೆ 1 ಕೆಜಿ ಬಂಗಾರ: ಮಾಜಿ ಸಚಿವ ಮುರುಗೇಶ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸಿಕೊಟ್ಟರೆ 1 ಕೆಜಿ ಬಂಗಾರ ನೀಡುವ ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ರಥದ ಮೇಲೆ ಮೆರವಣಿಗೆ ಮಾಡುವುದಾಗಿ ವಾಗ್ದಾನ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸಮಾಜದ ಋಣ ತೀರಿಸಿದಂತೆ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬಾಳ್ಕರ್‌ಗೆ ಮಾಜಿ ಸಚಿವ ಮುರುಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ ಸುವರ್ಣಸೌಧ ಮುಂದೆ ಪಂಚಮಸಾಲಿಗರ ಮೇಲೆ ಪೊಲೀಸರು ಲಾಠಿ ಜಾರ್ಜ್‌ ಮಾಡಿದ್ದನ್ನು ಖಂಡಿಸಿ ಗುರುವಾರ ಬಾಗಲಕೋಟೆ ಶಿರೂರ ಅಗಸಿ ಬಳಿ ಪಂಚಮಸಾಲಿ ಸಮಾಜದಿಂದ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಮಯದಲ್ಲಿ 2ಎ ಮೀಸಲಾತಿ ಸಮಾಜಕ್ಕೆ ಒದಗಿಸಿಕೊಟ್ಟರೆ ಸಹೋದರಿ, ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಬೆಳಗಾವಿಯಿಂದ ಕುಂದಾ ತಂದು, ಬಂಗಾರದ ಕಿರೀಟ ಹಾಕುವುದಾಗಿ ಹೇಳಿಕೆ ನೀಡಿದ್ದರು. ಇಂದು ನಿಮ್ಮ ಸರ್ಕಾರ ಬಂದು 18 ತಿಂಗಳ ಆಯ್ತು ನೀವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸಿಕೊಟ್ಟರೆ 1 ಕೆಜಿ ಬಂಗಾರ ನೀಡುವ ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ರಥದ ಮೇಲೆ ಮೆರವಣಿಗೆ ಮಾಡುವುದಾಗಿ ವಾಗ್ದಾನ ಮಾಡಿದರು.

ನೀವು ಅಂದು ಎಷ್ಟು ರೋಷವಾಗಿ ಕಿತ್ತೂರು ಚೆನ್ನಮ್ಮ ಅಂತಾ ಭಾಷಣ ಮಾಡಿದ್ದೀರಿ ಅದನ್ನು ಮರೆಯಬೇಡಿ. ಇವತ್ತು ಆ ಹೋರಾಟ ಮುಂದುವರೆಸಿ ನಾನು ನಿಮಗೆ ರಾಜೀನಾಮೆ ಕೇಳಲ್ಲ. ನೀವು ಈ ಸಮಾಜದಿಂದ ಮಂತ್ರಿಯಾಗಿದ್ದೀರಿ. ವಿಧಾನಸೌಧದ ಒಳಗಡೆ ಹೋರಾಟ ಮಾಡಿ 2ಎ ಮೀಸಲಾತಿ ಕೊಡಿಸಿ ಎಂದು ನಿರಾಣಿ ಒತ್ತಾಯಿಸಿದರು. ಬಹಳ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದ್ದಾಗ ಒಂದು ಸಮಿತಿ ರಚನೆ ಮಾಡಿದ್ದರು. ಆ ಸರ್ಕಾರ 3ಬಿ ನೀಡಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಸಮಾಜಕ್ಕೆ ಅನ್ಯಾಯ ಮಾಡದೇ 2ಡಿ ಮತ್ತು 2ಸಿ ಜಾರಿಗೆ ತಂದಿದ್ದರು. ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಮೀಸಲು ಹೋರಾಟ ಹತ್ತಿಕ್ಕುವ ಯತ್ನ ಮಾಡಿದೆ. ಅಮಾಯಕರ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣ ಹಿಂಪಡೆಯಬೇಕು. ಇಲ್ಲವಾದರೆ ಪೊಲೀಸರು ಸಮಾಜದ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ ಉಗ್ರ ಹೋರಾಟ ಕೈಗೊಳ್ಳುವುದು ಎಂದರು. ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ಸಮಾಜದ ಮುಖಂಡ ಶ್ರೀಶೈಲ ಕರಿಶಂಕರಿ ಮಾತನಾಡಿ, ನ್ಯಾಯ ಕೇಳಲು ಹೋದವರ ಮೇಲೆ ಲಾಠಿ ಪ್ರಹಾರ ನಡೆಸಿ ಪಂಚಮಸಾಲಿ ಸಮಾಜದ ಅಸ್ಮಿತೆಗೆ ಧಕ್ಕೆ ತಂದಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ನಡೆ ಖಂಡನೀಯ ಎಂದರು. ಮುಖಂಡ ಕಲ್ಲಪ್ಪ ಭಗವತಿ ಮಾತನಾಡಿ, ಹಲವು ವರ್ಷಗಳಿಂದ ಬಸವಣ್ಣನಂತೆ ಶಾಂತಿಯುತ ಹೋರಾಟ ನಡೆಸಿದ್ದೇವೆ. ಆದರೆ ಇನ್ನು ಮುಂದೆ ರಾಣಿ ಚೆನ್ನಮ್ಮಳ ರೀತಿಯಲ್ಲಿ ಕ್ರಾಂತಿಯಿಂದ ಹೋರಾಡುತ್ತೇವೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ರವಿ ಪಟ್ಟಣದ, ಮುಖಂಡರಾದ ಬಸವರಾಜ್ ರಾಜೂರ, ಆನಂದ ಕೋಟಗಿ, ಪರಶುರಾಮ್ ಮುಳುಗುಂದ, ನಿಂಗರಾಜ್ ಪಲ್ಲೇದ, ಪ್ರಶಾಂತ್ ಗಬ್ಬೂರ, ರಾಜು ಬಗಲಿ, ಸುರೇಶ್ ಕುನ್ನೂರ, ಬಸಪ್ಪ ಮೆಣಸಿ ನಕಾಯಿ, ಬಸು ಹುನಗುಂದ, ಗುರುಬಸವ ಸಿಂಧೂರ, ಸಂಗಣ್ಣ ಶಿರೂರ, ರಾಜಶೇಖರ್ ಅಂಗಡಿ, ಸಿದ್ದಪ್ಪ ಹಳ್ಳೂರ, ಉಮೇಶ್ ಹಂಚಿನಾಳ, ಹನುಮಂತಪ್ಪ ಶಿಕ್ಕೇರಿ, ಉಮೇಶ ಜುಮನಾಳ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.